ಗಣೇಶ ಹಬ್ಬದಂದೇ ಹೊಸ ಸಂಸತ್ ಭವನ ಪ್ರವೇಶಿಸಿದ ಲೋಕಸಭಾ, ರಾಜ್ಯಸಭಾ ಸದಸ್ಯರು ನವದೆಹಲಿ: ಹೊಸ ಸಂಸತ್ ಭವನಕ್ಕೆ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ಪ್ರವೇಶಿಸಿದರು. ಕೇಂದ್ರ ಸಚಿವರು ಮತ್ತು ಇತರ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೂತನ ಕಟ್ಟಡದೊಳಗೆ ಆಗಮಿಸಿದರು. ಇಂದಿನಿಂದ ಇದೇ ಭವನದಲ್ಲಿ ಉಭಯ ಕಲಾಪಗಳು ನಡೆಯಲಿವೆ.
ಸೋಮವಾರದಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಿದೆ. ಮೊದಲ ದಿನದ ಲೋಕಸಭಾ ಹಾಗೂ ರಾಜ್ಯಸಭಾ ಕಲಾಪಗಳು ಈಗಿರುವ ಹಳೆ ಸಂಸತ್ತಿನ ಭವನದಲ್ಲಿ ಜರುಗಿದ್ದವು. ಇಂದಿನಿಂದ ಹೊಸ ಭವನದಲ್ಲಿ ಕಲಾಪಗಳು ಶುರುವಾಗಿವೆ. ಇದರ ಭಾಗವಾಗಿ ಹಳೆ ಸಂಸತ್ ಕಟ್ಟಡದ ಸೆಂಟ್ರಲ್ ಹಾಲ್‌ನಲ್ಲಿ ವಿದಾಯ ಕಾರ್ಯಕ್ರಮ ನಡೆಯಿತು. ಇದರಲ್ಲಿ ಎರಡೂ ಸದನಗಳ ಸದಸ್ಯರು ಪಾಲ್ಗೊಂಡರು. ನಂತರ ಸಂಸತ್ ಸಂಕೀರ್ಣಕ್ಕೆ ಎಲ್ಲರೂ ಆಗಮಿಸಿದರು.
ಇದನ್ನೂ ಓದಿ:ಹಳೆ ಸಂಸತ್ ಭವನಕ್ಕೆ ಗುಡ್ ಬೈ: ಲೋಕಸಭಾ, ರಾಜ್ಯಸಭಾ ಸದಸ್ಯರ ಗ್ರೂಪ್ ಫೋಟೋ
ಪ್ರಧಾನಿ ಮೋದಿ ಅವರೊಂದಿಗೆ ಹಲವಾರು ಸಂಸದರು ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ನಡೆದುಕೊಂಡು ಬಂದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಸೇರಿದಂತೆ ಅನೇಕರು ಆಗಮಿಸಿದರು. ಇದೇ ವೇಳೆ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಸಂಸದರು 'ಭಾರತ್ ಮಾತಾ ಕಿ ಜೈ' ಮತ್ತು 'ವಂದೇ ಮಾತರಂ' ಎಂಬ ಘೋಷಣೆಗಳನ್ನು ಕೂಗುತ್ತಾ ಅವರನ್ನು ಹಿಂಬಾಲಿಸಿದರು.
ಮತ್ತೊಂದೆಡೆ, ಹಲವಾರು ಪ್ರತಿಪಕ್ಷಗಳ ಸಂಸದರು ಕೂಡ ಹೊಸ ಸಂಸತ್ತಿನ ಸಂಕೀರ್ಣದ ಕಡೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಪ್ರತ್ಯೇಕವಾಗಿ ಹೊಸ ಸಂಸತ್ತಿಗೆ ಪ್ರವೇಶಿಸಿದರು. ನಂತರದಲ್ಲಿ ಲೋಕಸಭೆ ಕಲಾಪ ಆರಂಭವಾಯಿತು. ಸದನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ''ನೂತನ ಸಂಸತ್ ಭವನದ ಮೊದಲ ಹಾಗೂ ಐತಿಹಾಸಿಕ ಅಧಿವೇಶನ ಇದಾಗಿದೆ. ನಾನು ದೇಶದ ಸಂಸದರು ಮತ್ತು ಜನರನ್ನು ಅಭಿನಂದಿಸುತ್ತೇನೆ'' ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ಹಳೆ ಸಂಸತ್ತಿನ ಕಟ್ಟಡದ ಐತಿಹಾಸಿಕ ಸೆಂಟ್ರಲ್ ಹಾಲ್‌ನಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ಪಿಎಂ ಮೋದಿ, ಹಳೆ ಸಂಸತ್ ಭವನವನ್ನು 'ಸಂವಿಧಾನ ಸದನ್' ಎಂದು ಹೆಸರಿಸಿದ್ದರು. ''1952ರಿಂದ ವಿಶ್ವದ 41 ರಾಷ್ಟಗಳ ಮುಖ್ಯಸ್ಥರು ಸೆಂಟ್ರಲ್ ಹಾಲ್‌ನಲ್ಲಿ ನಮ್ಮ ಸಂಸದರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕಳೆದ ಏಳು ದಶಕಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಕಾನೂನುಗಳನ್ನು ಸಂಸತ್ತು ಅಂಗೀಕರಿಸಿದೆ. ನಾವು ಹೊಸ ಸಂಸತ್ ಕಟ್ಟಡಕ್ಕೆ ಹೋಗುತ್ತಿದ್ದಂತೆ ನಾವು ಹಳೆಯ ಕಟ್ಟಡದ ಪ್ರತಿಷ್ಠೆ ಕಾಪಾಡಿಕೊಳ್ಳಬೇಕು'' ಎಂದು ಪ್ರಧಾನಿ ಕರೆ ನೀಡಿದರು. ಅಲ್ಲದೇ, ಹಳೆ ಕಟ್ಟಡದಲ್ಲಿ ಎರಡೂ ಸದನಗಳ ಸದಸ್ಯರು ಒಟ್ಟಾಗಿ ಫೋಟೋಗಳನ್ನು ತೆಗೆದುಕೊಂಡಿದ್ದರು.
ಇದನ್ನೂ ಓದಿ:ಹಳೆ ಸಂಸತ್ ಭವನಕ್ಕೆ 'ಸಂವಿಧಾನ ಸದನ್' ಎಂದು ಹೆಸರಿಸಿದ ಪ್ರಧಾನಿ ಮೋದಿ