ಗಾಂಧಿನಗರ(ಗುಜರಾತ್):ಡಿಸೆಂಬರ್ 1 ಮತ್ತು 5 ರಂದು ನಡೆಯುವ ಗುಜರಾತ್ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ನಡೆಸಿದೆ. ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಇದರಲ್ಲಿ 100 ವರ್ಷ ಪೂರೈಸಿದವರೇ 10 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಶತಾಯುಷಿಯಾದ ಹೀರಾಬೆನ್ ಮೋದಿ ಅವರು ಕೂಡ ಒಬ್ಬರಾಗಿದ್ದಾರೆ.
ಪ್ರಧಾನಿ ಅವರ ತಾಯಿ ಹೀರಾಬೆನ್ ಮೋದಿ ಅವರು ರೈಸನ್ ಪೆಟ್ರೋಲ್ ಪಂಪ್‌ನ ಹಿಂಭಾಗದಲ್ಲಿರುವ ವಾಡಿಭಾಯಿ ವಿದ್ಯಾ ಕಾಂಪ್ಲೆಕ್ಸ್‌ನ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಲಿದ್ದಾರೆ. ಹೀರಾಬೆನ್ ಅವರು ಕೊನೆಯ ಬಾರಿಗೆ ಅಂದರೆ 2021 ರ ನವೆಂಬರ್ 3 ರಂದು ನಡೆದ ಗಾಂಧಿನಗರ ಕಾರ್ಪೊರೇಷನ್ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು.
5 ಕೋಟಿ ಮತದಾರರಲ್ಲಿ 10 ಸಾವಿರ ಶತಾಯಿಷಿಗಳು:ರಾಜ್ಯದಲ್ಲಿ ಒಟ್ಟಾರೆ 4.91ಕೋಟಿ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅರ್ಹತೆ ಹೊಂದಿದ್ದಾರೆ. ಅದರಲ್ಲಿ 10,357 ಜನ ಶತಾಯುಷಿಗಳು ಇದ್ದಾರೆ. 100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಎರಡೂ ಹಂತಗಳಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ.