ನೋಯ್ಡಾ(ಉತ್ತರ ಪ್ರದೇಶ):ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ, ಮತ್ತೊಂದು ಅವಧಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಇನ್ನಿಲ್ಲದ ಕರಸತ್ತು ನಡೆಸುತ್ತಿದೆ.
ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿರುವ ಪ್ರಧಾನಿ ಮೋದಿ, ಇಂದು ನೋಯ್ಡಾದಲ್ಲಿ ಏಷ್ಯಾದ ಅತಿದೊಡ್ಡ ಏರ್ಪೋರ್ಟ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು.
ಗೌತಮ ಬುದ್ಧನಗರದ ಜೇವರ್‌ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಏರ್ಪೋರ್ಟ್ಗಳ ನಿರ್ಮಾಣದಿಂದ ದೇಶದ ಆರ್ಥಿಕತೆ, ಅಭಿವೃದ್ಧಿಗೆ ಹೆಚ್ಚಿನ ಲಾಭವಾಗಲಿದೆ. ಪ್ರವಾಸೋದ್ಯಮ, ಸರಕು ಸಾಗಣೆಯ ಜೊತೆಗೆ, ಉದ್ಯೋಗ ಸೃಷ್ಟಿಸಲು ವಿಮಾನ ನಿಲ್ದಾಣಗಳು ಹೆಚ್ಚು ಸಹಕಾರಿ. ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಭಾರತದ ಸರಕು ಸಾಗಣೆಗೆ ದೊಡ್ಡ ಹೆದ್ದಾರಿ ಆಗಲಿದೆ ಎಂದರು.
ಈ ವಿಮಾನ ನಿಲ್ದಾಣ ರಾಜ್ಯದ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಸಿ ಕೊಡಲಿದೆ. ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದ್ದು ಏರ್ಪೋರ್ಟ್ನಿಂದ ಕೋಟ್ಯಂತರ ಜನರಿಗೆ ಪ್ರಯೋಜನವಾಗಲಿದೆ. ಅನೇಕ ಅಂತಾರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಇಲ್ಲಿಂದ ನೇರ ಸಂಪರ್ಕ ಸಿಗುತ್ತೆ. ಈ ಪ್ರದೇಶದ ರೈತರು ಬೆಳೆಯುವ ತರಕಾರಿ, ಹಣ್ಣು ಮತ್ತು ಮೀನು ವಿದೇಶಕ್ಕೆ ರಫ್ತು ಮಾಡಲು ಅನುವಾಗಲಿದೆ ಎಂದು ಪ್ರಧಾನಿ ವಿವರಿಸಿದರು.