ಖುಷಿನಗರ (ಉತ್ತರ ಪ್ರದೇಶ): ಭಗವಾನ್ ಬುದ್ಧನ ಬೋಧಿವೃಕ್ಷ ಸೇರಿ ಹಲವು ಧಾರ್ಮಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಿರುವ ಖುಷಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದಾರೆ.
ಖುಷಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟಿಸಿದ ಪ್ರಧಾನಿ ಮೋದಿ ಸುಮಾರು 260 ಕೋಟಿ ರೂಪಾಯಿ ವೆಚ್ಚದಲ್ಲಿ 3,600 ಚದರಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಉತ್ತರ ಪ್ರದೇಶದ 5ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಿದ್ದು, ಇಂದಿನಿಂದ ವಿಮಾನ ಹಾರಾಟಕ್ಕೆ ತೆರೆದುಕೊಂಡಿದೆ. ಇದೇ ವೇಳೆ, ಬೌದ್ಧ ಸನ್ಯಾಸಿಗಳಿದ್ದ ಮೊದಲ ವಿಮಾನವು ಕೊಲಂಬೋದಿಂದ ಹೊಸ ನಿಲ್ದಾಣಕ್ಕೆ ಬಂದಿಳಿಯಿತು.
ಈ ವಿಮಾನ ನಿಲ್ದಾಣವು ಒಂದೇ ಬಾರಿಗೆ ಗರಿಷ್ಟ 300 ಪ್ರಯಾಣಿಕರನ್ನು ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿದೆ. ವಿಮಾನ ನಿಲ್ದಾಣದಲ್ಲಿ ಬುದ್ಧನ ಪ್ರತಿಮೆ ಸೇರಿದಂತೆ ಬುದ್ದನ ಸಂದೇಶ ಸಾರುವ ಹಲವು ವಿಷಯ ವಸ್ತುಗಳು ಕಾಣಸಿಗುತ್ತವೆ.
ಖುಷಿನಗರ ವಿಮಾನ ನಿಲ್ದಾಣದ ಆರಂಭದಿಂದಾಗಿ ಲುಂಬಿನಿ, ಬೋಧಗಯಾ, ಸಾರನಾಥ, ಖುಷಿನಗರ, ಶ್ರಾವಸ್ತಿ, ರಾಜಗೀರ್, ಸಂಕಿಸಾ ಮತ್ತು ಬೌದ್ಧ ಸರ್ಕ್ಯೂಟ್‌ನ ವೈಶಾಲಿ ಪ್ರಯಾಣವನ್ನು ಕಡಿಮೆ ಸಮಯದ ಅಂತರದಲ್ಲಿ ಕೈಗೊಳ್ಳಬಹುದು.
ನಿಲ್ದಾಣ ಉದ್ಘಾಟನೆಯ ಬಳಿಕ ಮಾತನಾಡಿರುವ ಪ್ರಧಾನಿ ಮೋದಿ, 'ಖುಷಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಶಕದ ನಿರೀಕ್ಷೆಗಳ ಫಲಿತಾಂಶ. ಇದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ' ಎಂದರು.
ಈ ನಿಲ್ದಾಣವು ಸಣ್ಣ ಉದ್ಯಮಿಗಳು, ಪ್ರವಾಸಿಗರು ಸೇರಿದಂತೆ ಸ್ಥಳೀಯರಿಗೂ ನೆರವಾಗಲಿದೆ. ಪ್ರವಾಸೋದ್ಯಮವು ಗರಿಷ್ಟ ಲಾಭಗಳಿಸುವುದಲ್ಲದೆ, ಇಲ್ಲಿನ ಯುವಕರಿಗೆ ಉದ್ಯೋಗ ಲಭಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ:ನೋಡಿ: ಕಣ್ಣಿಗೆ ಬಟ್ಟೆ ಕಟ್ಟಿ ಖಡ್ಗ ಝಳಪಿಸಿ ಕೌಶಲ ಪ್ರದರ್ಶಿಸಿದ ರಜಪೂತ ಮಹಿಳೆ