ನವದೆಹಲಿ: ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದ ಸಂಭವಿಸಿದ ಸಾವು ನೋವುಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂತಾಪ ಸೂಚಿಸಿದ್ದಾರೆ. ಗುಜರಾತಿನಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡ 2001 ರ ಭುಜ್ ಭೂಕಂಪದ ನೆನಪು ಮಾಡಿಕೊಂಡ ಅವರು ಭಾವುಕರಾದರು. ಭಾರತೀಯ ಜನತಾ ಪಕ್ಷದ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿ ಭಾವುಕರಾದರು.
ಸಂಸತ್ತಿನ ಬಜೆಟ್ ಅಧಿವೇಶನದ ಕಲಾಪ ಪ್ರಾರಂಭವಾಗುವ ಮೊದಲು ಇಂದು ಬೆಳಗ್ಗೆ ಮಾತನಾಡಿದ ಅವರು, ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಂಭವಿಸಿದ್ದ 2001 ರ ವಿನಾಶಕಾರಿ ಭುಜ್ ಭೂಕಂಪವನ್ನು ನೆನಪಿಸಿಕೊಂಡರು ಮತ್ತು ರಕ್ಷಣಾ ಕಾರ್ಯಾಚರಣೆಗೆ ಉಂಟಾಗಿದ್ದ ಸವಾಲುಗಳ ಬಗ್ಗೆ ಮಾತನಾಡಿದರು.
ಸೋಮವಾರ ಟರ್ಕಿ ಮತ್ತು ಸಿರಿಯಾ ಎರಡರಲ್ಲೂ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ದೇಶಗಳಿಗೆ ಭಾರತ ಸರ್ಕಾರವು ಮಾನವೀಯ ನೆರವು ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದರು. ಟರ್ಕಿಯಲ್ಲಿ ಈಗ ಎಂಥ ಕೆಟ್ಟ ಪರಿಸ್ಥಿತಿ ಇದೆ ಎಂಬುದನ್ನು ನಾನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ ಎಂದು ಪ್ರಧಾನಿ ಹೇಳಿದರು. 2001 ರಲ್ಲಿ ಗುಜರಾತ್‌ನ ಕಚ್ ಜಿಲ್ಲೆಯ ಭುಜ್‌ನಲ್ಲಿ ಭಾರಿ ಭೂಕಂಪ ಸಂಭವಿಸಿತ್ತು. ಇದರಲ್ಲಿ 20,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 1.5 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡರು. ಭೂಕಂಪದಿಂದಾಗಿ ಸಾವಿರಾರು ಮಂದಿ ನಿರಾಶ್ರಿತರಾದರು.
ಅಧಿಕಾರಿಗಳು ಮತ್ತು ಏಜೆನ್ಸಿಗಳ ಪ್ರಕಾರ, ಸೋಮವಾರ ಮುಂಜಾನೆ ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ ಕನಿಷ್ಠ 4,372 ಜನ ಸಾವಿಗೀಡಾಗಿದ್ದಾರೆ ಮತ್ತು ಸಾವಿರಾರು ಜನ ಗಾಯಗೊಂಡಿದ್ದಾರೆ. ಸಿರಿಯಾದಲ್ಲಿ 1,451 ಜನ ಮೃತಪಟ್ಟಿದ್ದು, 3,531 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಎರಡೂ ದೇಶಗಳಲ್ಲಿ ಸಾವಿರಾರು ಕಟ್ಟಡಗಳು ಕುಸಿದಿವೆ. ವಿಶೇಷವಾಗಿ ವಾಯುವ್ಯ ಸಿರಿಯಾದಲ್ಲಿನ ಪರಿಸ್ಥಿತಿ ಕಳವಳಕಾರಿಯಾಗಿದೆ. ಅಲ್ಲಿ ಈಗಾಗಲೇ 4 ದಶಲಕ್ಷಕ್ಕೂ ಹೆಚ್ಚು ಜನರು ಮಾನವೀಯ ಸಹಾಯದ ನಿರೀಕ್ಷೆಯಲ್ಲಿದ್ದಾರೆ.