ನವದೆಹಲಿ:ಕ್ರಿಪ್ಟೋಕರೆನ್ಸಿ (Cryptocurrency) ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಕ್ರಿಪ್ಟೋಕರೆನ್ಸಿ ವಿಚಾರವಾಗಿ ಶನಿವಾರ ಸಭೆ ನಡೆಸಿದ ಅದರ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಧಾನಿ ಮೋದಿ (Prime Minister Modi) ಅವರು ಅಕ್ರಮ ಹಣ ವರ್ಗಾವಣೆ (Money Laundering) ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸಲು ಸಾಧ್ಯವಾಗುವ ಕ್ರಿಪ್ಟೋಕರೆನ್ಸಿಯಂಥಹ ಅನಿಯಂತ್ರಿತ ವ್ಯವಸ್ಥೆಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದಿದ್ದಾರೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಕ್ರಿಪ್ಟೋಕರೆನ್ಸಿ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನವಾಗಿದೆ ಎಂಬ ಅಂಶವನ್ನು ಸರ್ಕಾರವು ಅರಿತುಕೊಂಡಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸರ್ಕಾರವು ತಜ್ಞರು ಮತ್ತು ಇತರರೊಂದಿಗೆ ಚರ್ಚಿಸಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕ್ರಿಪ್ಟೋ ಕರೆನ್ಸಿ ವಿಚಾರವಾಗಿ ಆರ್‌ಬಿಐ, ಹಣಕಾಸು ಸಚಿವಾಲಯ, ಗೃಹ ಸಚಿವಾಲಯವು ಅಧ್ಯಯನ ಮಾಡಿವೆ. ದೇಶದೊಳಗಿನ ಮತ್ತು ಪ್ರಪಂಚದಾದ್ಯಂತದ ತಜ್ಞರನ್ನು ಸಂಪರ್ಕಿಸಿ ಅಭಿಪ್ರಾಯನ್ನು ಸಂಗ್ರಹಿಸಲಾಗಿದೆ. ಜಾಗತಿಕವಾಗಿ ಈಗಿರುವ ಕ್ರಿಪ್ಟೋಕರೆನ್ಸಿಯ ವಿವಿಧ ಮಾದರಿಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.