ನವದೆಹಲಿ:ದೀಪಾವಳಿ ಸಂಭ್ರಮಾಚರಣೆಗೆ ಕೆಲ ದಿನ ಮಾತ್ರ ಬಾಕಿ ಉಳಿದಿದೆ. ಇದರ ಮಧ್ಯೆ ಕೆಲವೊಂದು ರಾಜ್ಯಗಳಲ್ಲಿ ಪಟಾಕಿ ಮಾರಾಟ ಸಂಪೂರ್ಣ ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿದ್ದು, ಇದೀಗ ಪ್ರಧಾನಿ ಮೋದಿ ದೇಶದ ಜನರ ಮುಂದೆ ಮತ್ತೊಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.
'ವೋಕಲ್ ಫಾರ್ ಲೋಕಲ್' ಮಂತ್ರ: ದೀಪಾವಳಿ ವೇಳೆ ಸ್ಥಳೀಯ ಉತ್ಪನ್ನ ಖರೀದಿಗೆ ನಮೋ ಮನವಿ! - ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ದಿನಗಣನೇ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ದೇಶದ ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
'ವೋಕಲ್ ಫಾರ್ ಲೋಕಲ್' 'ಲೋಕಲ್ ಫಾರ್ ದೀಪಾವಳಿ' ಮಂತ್ರ ಜಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಉತ್ಪನ್ನ ಖರೀದಿ ಮಾಡುವಂತೆ ಮನವಿ ಮಾಡಿದ್ದಾರೆ. ದೀಪಾವಳಿ ಸಮಯದಲ್ಲಿ ಸ್ಥಳೀಯ ಉತ್ಪನ್ನ ಖರೀದಿ ಮಾಡುವುದರಿಂದ ಆರ್ಥಿಕತೆಗೆ ಹೊಸ ಚೈತನ್ಯ ಸಿಗಲಿದೆ ಎಂದಿರುವ ನಮೋ, ಈ ಸಮಯದಲ್ಲಿ ದೇಶಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದ್ದಾರೆ.
ಸಂಸದೀಯ ಸ್ವಕ್ಷೇತ್ರ ವಾರಣಾಸಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲರೂ ಈ ಸಮಯದಲ್ಲಿ ಸ್ಥಳೀಯ ಉತ್ಪನ್ನ ಖರೀದಿ ಮಾಡಿದಾಗ ನಾವು ಇದರ ಬಗ್ಗೆ ಮಾತನಾಡುತ್ತೇವೆ. ಜತೆಗೆ ಬೇರೆಯವರು ಖರೀದಿ ಮಾಡಲು ಇದು ಪ್ರೇರಣೆ ನೀಡಿದಂತಾಗುತ್ತದೆ. ಇದರ ಜತೆಗೆ ಕೇವಲ ದೀಪ ಖರೀದಿ ಮಾಡಬೇಡಿ, ಎಲ್ಲವನ್ನೂ ಸ್ಥಳೀಯ ಉತ್ಪನ್ನ ಖರೀದಿ ಮಾಡಿ, ಬೆಳಕಿನ ಹಬ್ಬ ದೀಪಾವಳಿ ಆಚರಣೆ ಮಾಡಿ ಎಂದು ಮನವಿ ಮಾಡಿದ್ದಾರೆ.