ನವದೆಹಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖಸ್ಥ, ಬಿಜೆಪಿ ಸಂಸದ ಭೂಷಣ್ ಶರಣ್ ಸಿಂಗ್ ವಿರುದ್ಧ ದೇಶದ ಖ್ಯಾತ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. "ನೀವು ನಮ್ಮ ಮನ್ ಕಿ ಬಾತ್ ಅನ್ನು ಏಕೆ ಕೇಳುತ್ತಿಲ್ಲ" ಎಂದು ಪ್ರತಿಭಟನಾನಿರತ ಕುಸ್ತಿಪಟುಗಳು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನಿಸಿದ್ದಾರೆ.
ಭೂಷಣ್ ಶರಣ್ ಸಿಂಗ್ ವಿರುದ್ಧ ತನಿಖೆಗೆ ಒತ್ತಾಯಿಸಿ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಫೊಗಟ್, ರವಿ ದಹಿಯಾ ಹಾಗೂ ಸಾಕ್ಷಿ ಮಲಿಕ್ ಸೇರಿದಂತೆ ಅನೇಕರು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ರಾಜಕಾರಣಿಗಳು ಮತ್ತು ರೈತ ಸಂಘಟನೆಗಳ ಮುಖಂಡರು ಭೇಟಿ ನೀಡಿ ತಮ್ಮ ಬೆಂಬಲ ಸೂಚಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸಹ ಪ್ರತಿಭಟನಾನಿರತ ಕುಸ್ತಿಪಟುಗಳನ್ನು ಭೇಟಿಯಾಗಿ ಬೆಂಬಲ ಸೂಚಿಸಿದ್ದಾರೆ. ಈ ವೇಳೆ ಮಾತನಾಡಿದ ಸತ್ಯಪಾಲ್ ಮಲಿಕ್, ಕ್ರೀಡೆಯಲ್ಲಿ ತಮ್ಮ ಸಾಧನೆ ಮತ್ತು ಯಶಸ್ವಿಯಿಂದ ದೇಶದಲ್ಲಿ ಗೌರವವನ್ನು ಪಡೆದಿದ್ದ ಕ್ರೀಡಾಪಟುಗಳು ಈಗ ನ್ಯಾಯಕ್ಕಾಗಿ ಬೀದಿಯಲ್ಲಿ ಹೋರಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಹೋರಾಟವು ಕೊನೆಗೊಳ್ಳುವವರೆಗೂ ಎಲ್ಲರೂ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಕುಸ್ತಿಪಟುಗಳು ಮಾತನಾಡಿ, ಪ್ರಧಾನಿ ಮೋದಿ ಅವರು ನಾವು ಪದಕಗಳನ್ನು ಗೆದ್ದಾಗ ನಮ್ಮೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿ ಅಭಿನಂದಿಸುವ ಮೂಲಕ ಆಶ್ಚರ್ಯ ಪಡುವಂತೆ ಮಾಡಿದ್ದರು. ಆದರೆ, ಈಗ ನ್ಯಾಯಕ್ಕಾಗಿ ರಸ್ತೆಯಲ್ಲಿದ್ದಾಗ ನಮ್ಮ ಕಷ್ಟದ ಬಗ್ಗೆ ಕಣ್ಣು ಮುಚ್ಚಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಪ್ರಧಾನಿ ಮೋದಿ ಸರ್, ಬೇಟಿ ಬಚಾವೋ ಮತ್ತು ಬೇಟಿ ಪಢಾವೋ ಬಗ್ಗೆ ಮಾತನಾಡುತ್ತಾರೆ. ಪ್ರತಿಯೊಬ್ಬರ ಮನ್ ಕಿ ಬಾತ್ ಅನ್ನು ಕೇಳುತ್ತಾರೆ. ನಮ್ಮ ಮನ್ ಕಿ ಬಾತ್ ಕೇಳಲು ಆಗುವುದಿಲ್ಲವೇ?, ನಾವು ಪದಕಗಳನ್ನು ಗೆದ್ದಾಗ ನಮ್ಮನ್ನು ಅವರ ಮನೆಗೆ ಆಹ್ವಾನಿಸುತ್ತಾರೆ. ನಮಗೆ ಗೌರವವನ್ನು ನೀಡುತ್ತಾರೆ. ನಮ್ಮನ್ನು ಅವರ ಹೆಣ್ಣುಮಕ್ಕಳು ಎಂದು ಕರೆಯುತ್ತಾರೆ. ಇಂದು ಅವರು ನಮ್ಮ ಮನ್ ಕಿ ಬಾತ್ ಅನ್ನು ಕೇಳಬೇಕೆಂದು ನಾವು ಅವರಿಗೆ ಮನವಿ ಮಾಡುತ್ತೇವೆ'' ಎಂದು ರಿಯೊ ಗೇಮ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಹೇಳಿದರು.
ಅಲ್ಲದೇ, "ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ನಾನು ಕೇಳಲು ಬಯಸುತ್ತೇನೆ. ಅವರು ಈಗ ಏಕೆ ಮೌನವಾಗಿದ್ದಾರೆ. ನಾಲ್ಕು ದಿನಗಳಿಂದ ನಾವು ಸೊಳ್ಳೆ ಕಡಿತವನ್ನು ಸಹಿಸಿಕೊಂಡು ರಸ್ತೆಯ ಮೇಲೆ ಮಲಗಿದ್ದೇವೆ. ನಮಗೆ ದೆಹಲಿ ಪೊಲೀಸರು ಆಹಾರ ತಯಾರಿಸಲು ಮತ್ತು ನಮ್ಮ ಅಭ್ಯಾಸಕ್ಕೂ ಅನುಮತಿ ನೀಡುತ್ತಿಲ್ಲ. ನೀವು ಯಾಕೆ ಮೌನವಾಗಿದ್ದೀರಿ?, ನೀವು ಇಲ್ಲಿಗೆ ಬನ್ನಿ, ನಮ್ಮ ಮಾತನ್ನು ಕೇಳಿ ಮತ್ತು ನಮ್ಮನ್ನು ಬೆಂಬಲಿಸಿ'' ಎಂದು ಸಾಕ್ಷಿ ಒತ್ತಾಯಿಸಿದರು.
ಇದೇ ವೇಳೆ, "ಬಹುಶಃ ನಮ್ಮ ಸತ್ಯವು ಪ್ರಧಾನಿ ಮೋದಿ ಅವರಿಗೆ ತಲುಪುತ್ತಿಲ್ಲ. ಆದ್ದರಿಂದ ನಾವು ಅವರನ್ನು ಭೇಟಿ ಮಾಡಲು ಮತ್ತು ನಮ್ಮ ಸಮಸ್ಯೆಗಳನ್ನು ಅವರಿಗೆ ತಿಳಿಸಲು ಬಯಸುತ್ತೇವೆ'' ಎಂದು ತಿಳಿಸಿದರು. ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಮಾತನಾಡಿ, "ನಾವು ಪ್ರಧಾನಿ ಅವರನ್ನು ಸಂಪರ್ಕಿಸಲು ಸಂಬಂಧಪಟ್ಟ ವ್ಯಕ್ತಿಗಳ ದೂರವಾಣಿ ಸಂಖ್ಯೆ ನಮ್ಮ ಬಳಿ ಇಲ್ಲ . ಆದ್ದರಿಂದ ನಾವು ಸಮಸ್ಯೆಗಳನ್ನು ಮಾಧ್ಯಮಗಳ ಮೂಲಕ ಪ್ರಧಾನಿ ಮೋದಿಯವರಿಗೆ ಪ್ರಸ್ತಾಪಿಸುತ್ತಿದ್ದೇವೆ'' ಎಂದರು.
ಮುಂದುವರೆದು, ''ಬಹುಶಃ ಪ್ರಧಾನಿ ನಮ್ಮ ಅಳಲನ್ನು ಆಲಿಸಬಹುದು. ನಮ್ಮ ಆತ್ಮಗಳು ಬಹುತೇಕ ಸತ್ತು ಹೋಗಿವೆ. ಇದನ್ನು ಅವರು ಗಮನಿಸುತ್ತಾರೆ ಎಂದು ಭಾವಿಸಿದ್ದೇವೆ. ಪ್ರಧಾನಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮ ಮಾಡುತ್ತಾರೆ. ನಮ್ಮ ಮನ್ ಕಿ ಬಾತ್ ಬಗ್ಗೆ ಅವರು ಒಂದು ನಿಮಿಷವಾದರೂ ಯೋಚಿಸಿದ್ದಾರೆಯೇ?, ದೇಶದ ಹೆಣ್ಣು ಮಕ್ಕಳು ರಸ್ತೆಗಳಲ್ಲಿ ಕುಳಿತಿದ್ದಾರೆ. ಎಂತಹ ಸಂದಿಗ್ಧತೆಯನ್ನು ನಾವು ಎದುರಿಸುತ್ತಿದ್ದೇಂದು ಅವರಿಗೆ ಗೊತ್ತಾಗುತ್ತಿದೆಯೇ'' ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ದೇಶಕ್ಕಾಗಿ ಪದಕ ಗೆಲ್ಲಲೇ ಬೇಕು: 4ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ತರಬೇತಿ ಆರಂಭಿಸಿದ ಕುಸ್ತಿಪಟುಗಳು