ಕರ್ನಾಟಕ

karnataka

ETV Bharat / bharat

ಜ್ಞಾನವಾಪಿ ಮಸೀದಿ ಪ್ರಕರಣ: ಎಎಸ್‌ಐ ಸಮೀಕ್ಷಾ ವರದಿ ಕುರಿತ ಅರ್ಜಿ ವಿಚಾರಣೆ ಜನವರಿ 3ಕ್ಕೆ ನಿಗದಿ - Ajay Krishna Vishvesha

ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್‌ಐ ಸಮೀಕ್ಷಾ ವರದಿ ಕುರಿತ ಅರ್ಜಿ ವಿಚಾರಣೆಯನ್ನು ವಾರಾಣಸಿ ನ್ಯಾಯಾಲಯ ಜನವರಿ 3ಕ್ಕೆ ನಿಗದಿಗೊಳಿಸಿದೆ.

ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ

By ETV Bharat Karnataka Team

Published : Dec 22, 2023, 9:57 AM IST

ವಾರಣಾಸಿ : ಜ್ಞಾನವಾಪಿ ಮಸೀದಿ ಪ್ರಕರಣದ ಎಎಸ್‌ಐ ಸಮೀಕ್ಷಾ ವರದಿ ಕುರಿತ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ (ಎಐಎಂಸಿ) ಸೇರಿದಂತೆ ಮೂರು ಅರ್ಜಿಗಳ ಮುಂದಿನ ವಿಚಾರಣೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯವು ಜನವರಿ 3 ಕ್ಕೆ ನಿಗದಿಪಡಿಸಿದೆ. ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷಾ ವರದಿಯನ್ನು ಮುಚ್ಚಿದ ಕವರ್‌ನಲ್ಲಿ ಇಡಬೇಕು ಮತ್ತು ಯಾರಿಗೂ ಸೋರಿಕೆಯಾಗುವುದಿಲ್ಲ ಎಂದು ಅಫಿಡವಿಟ್‌ನಲ್ಲಿ ವೈಯಕ್ತಿಕ ಒಪ್ಪಂದವನ್ನು ಸಲ್ಲಿಸದ ಹೊರತು ಯಾವುದೇ ಕಕ್ಷಿದಾರರಿಗೆ ನೀಡಬಾರದು ಎಂದು ಕೋರಲಾಗಿತ್ತು.

ಜ್ಞಾನವಾಪಿ ಮಸೀದಿ ನಿರ್ವಹಣೆ ಮಾಡುತ್ತಿರುವ ಎಐಎಂಸಿ ಈ ಅರ್ಜಿಯನ್ನು ಸಲ್ಲಿಸಿದರೆ, ಇನ್ನೊಂದು ಅರ್ಜಿಯನ್ನು ನಾಲ್ವರು ಹಿಂದೂ ಮಹಿಳಾ ಫಿರ್ಯಾದಿಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಡಿಸೆಂಬರ್ 18 ರಂದು ಸಲ್ಲಿಸಿದ್ದರು.

“ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷಾ ವರದಿಯನ್ನು ಮುಚ್ಚಿದ ಕವರ್‌ನಲ್ಲಿ ಇಡಬೇಕು ಮತ್ತು ಯಾರಿಗೂ ಸೋರಿಕೆಯಾಗುವುದಿಲ್ಲ ಎಂದು ಅಫಿಡವಿಟ್‌ನಲ್ಲಿ ವೈಯಕ್ತಿಕ ಒಪ್ಪಂದವನ್ನು ಸಲ್ಲಿಸದ ಹೊರತು ಯಾವುದೇ ಕಕ್ಷಿದಾರರಿಗೆ ನೀಡಬಾರದು ಎಂದು ನಾವು ನ್ಯಾಯಾಲಯಕ್ಕೆ ಪ್ರಾರ್ಥಿಸಿದ್ದೇವೆ " ಎಂದು ಎಐಎಂಸಿಯ ವಕೀಲ ಅಖ್ಲಾಕ್ ಅಹ್ಮದ್ ತಿಳಿಸಿದ್ದರು. ಮುಂದಿನ ವಿಚಾರಣೆಯ ದಿನಾಂಕವನ್ನು ಜನವರಿ 3ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.

ಎಐಎಂಸಿ ಪರವಾಗಿ ಅರ್ಜಿ ಸಲ್ಲಿಸಿದ ಅಹ್ಮದ್, “ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣದಲ್ಲಿ (ನಾಲ್ಕು) ಮಹಿಳಾ ಫಿರ್ಯಾದುದಾರರ ಪರವಾಗಿ, ಅವರ ವಕೀಲ ವಿಷ್ಣು ಶಂಕರ್ ಜೈನ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದರ ಪ್ರತಿಯನ್ನು ನೀಡುವಂತೆ ಒತ್ತಾಯಿಸಿದರು. ಸಮೀಕ್ಷಾ ವರದಿಯನ್ನು ಜೈನ್ ಅವರ ಮೇಲ್ ಐಡಿಗೆ ಕಳುಹಿಸಬೇಕು. ಆದರೆ, ನ್ಯಾಯಾಲಯವು ಸಮೀಕ್ಷಾ ವರದಿಯನ್ನು ಮೇಲ್‌ನಲ್ಲಿ ಕಳುಹಿಸಬಹುದು ಎಂಬ ನಿರ್ಧಾರಕ್ಕೆ ಬಂದರೆ, ನಾವು ಎಎಸ್‌ಐ ಸಮೀಕ್ಷೆ ವರದಿಯನ್ನು ಕಳುಹಿಸಲು ಆದೇಶ ನೀಡುವಂತೆ ನ್ಯಾಯಾಲಯಕ್ಕೆ ಪ್ರಾರ್ಥಿಸಿದ್ದೇವೆ'' ಎಂದಿದ್ದಾರೆ.

ಡಿಸೆಂಬರ್ 18 ರಂದು ಜೈನ್ ಅವರು ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ನಾಲ್ಕು ಹಿಂದೂ ಮಹಿಳಾ ಫಿರ್ಯಾದಿಗಳ ಪರವಾಗಿ ಅರ್ಜಿ ಸಲ್ಲಿಸಿದ್ದರು. ಸಮೀಕ್ಷೆಯ ವರದಿಯ ಪ್ರತಿಯನ್ನು ಕೋರಿ ಅರ್ಜಿ ಸಲ್ಲಿಸುವ ಮೂಲಕ ನಾವು ಸಮೀಕ್ಷೆಯ ವರದಿಯ ಪ್ರತಿಯನ್ನು ನಮಗೆ ನೀಡುವಂತೆ ನ್ಯಾಯಾಲಯಕ್ಕೆ ಪ್ರಾರ್ಥಿಸಿದ್ದೇವೆ ಎಂದು ಜೈನ್ ಹೇಳಿದ್ದರು.

ಡಿ.18ರಂದು ಎಎಸ್‌ಐ ಜ್ಞಾನವಾಪಿ ವೈಜ್ಞಾನಿಕ ಸಮೀಕ್ಷಾ ವರದಿಯನ್ನು ಮೊಹರು ಮಾಡಿದ ಕವರ್​ನಲ್ಲಿ ಜಿಲ್ಲಾ ನ್ಯಾಯಾಧೀಶ ಅಜಯ ಕೃಷ್ಣ ವಿಶ್ವೇಶ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದೆ ಎಂದು ಎಎಸ್‌ಐ ಪರ ಹಾಜರಿದ್ದ ಸರ್ಕಾರಿ ವಕೀಲ ಅಮಿತ್ ಶ್ರೀವಾಸ್ತವ ತಿಳಿಸಿದ್ದಾರೆ. ಮತ್ತೊಂದು ಮೊಹರು ಮಾಡಿದ ಲಕೋಟೆಯಲ್ಲಿ ಎಎಸ್‌ಐ ತಂಡವು ಸಮೀಕ್ಷೆಯ ಸಮಯದಲ್ಲಿ ಕಂಡುಬಂದ ವಸ್ತುಗಳ ಪಟ್ಟಿಯನ್ನು ಸಲ್ಲಿಸಿತ್ತು.

ಮೂರು ವಾರಗಳ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಕೆ : ನವೆಂಬರ್ 2 ರಂದು ಸಮೀಕ್ಷೆ ಪೂರ್ಣಗೊಂಡಿದೆ ಎಂದು ASI ತಂಡ ನ್ಯಾಯಾಲಯಕ್ಕೆ ತಿಳಿಸಿತ್ತು. ಅಲ್ಲದೇ ವರದಿಯನ್ನು ತಯಾರಿಸಲು ನ್ಯಾಯಾಲಯಕ್ಕೆ 15 ದಿನಗಳ ಕಾಲಾವಕಾಶವನ್ನು ಕೇಳಿತ್ತು. ನವೆಂಬರ್ 17ರೊಳಗೆ ವರದಿ ಸಲ್ಲಿಸುವಂತೆ ಎಎಸ್‌ಐಗೆ ನ್ಯಾಯಾಲಯ 15 ದಿನಗಳ ಕಾಲಾವಕಾಶ ನೀಡಿತ್ತು. ನವೆಂಬರ್ 18 ರಂದು, ನ್ಯಾಯಾಲಯವು 10 ದಿನಗಳ ಕಾಲಾವಕಾಶವನ್ನು ನೀಡಿತ್ತು. ನವೆಂಬರ್ 28 ರಂದು ವರದಿಯನ್ನು ಸಲ್ಲಿಸಲು ASI ಗೆ ಆದೇಶಿಸಿತು. ASI ವರದಿಯನ್ನು ಸಲ್ಲಿಸಲು ಇನ್ನೂ ಮೂರು ವಾರಗಳ ಕಾಲಾವಕಾಶವನ್ನು ಕೋರಿ ಅರ್ಜಿಯನ್ನು ಸಲ್ಲಿಸಿತ್ತು. ಅಂತಿಮವಾಗಿ ಮೊನ್ನೆ ವರದಿಯನ್ನು ಎಎಸ್​ಐ ಕೋರ್ಟ್​ಗೆ ಸಲ್ಲಿಕೆ ಮಾಡಿತ್ತು.

ಇದನ್ನೂ ಓದಿ:ಜ್ಞಾನವಾಪಿ ಮಸೀದಿ ಪ್ರಕರಣ: ಅಲಹಾಬಾದ್ ಹೈಕೋರ್ಟ್​ನಿಂದ ಇಂದು ತೀರ್ಪು ಪ್ರಕಟ ಸಾಧ್ಯತೆ

ABOUT THE AUTHOR

...view details