ಕರ್ನಾಟಕ

karnataka

ETV Bharat / bharat

ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ: ಪ್ರತಿಪಕ್ಷಗಳ ಅರ್ಜಿ ವಿಚಾರಣೆಗೆ ಸುಪ್ರೀಂ​ ನಕಾರ - ಪ್ರತಿಪಕ್ಷಗಳ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ ಸಂಬಂಧ ಪ್ರತಿಪಕ್ಷಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿತು.

Plea alleging misuse of central probe agencies: Supreme Court refuses to entertain
ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ: ಪ್ರತಿಪಕ್ಷಗಳ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್​ ನಕಾರ

By

Published : Apr 5, 2023, 4:26 PM IST

Updated : Apr 5, 2023, 5:31 PM IST

ನವದೆಹಲಿ: ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪದಡಿ ಕಾಂಗ್ರೆಸ್ ಸೇರಿ ಒಟ್ಟು 14 ಪ್ರತಿಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಇಂದು (ಬುಧವಾರ) ನಿರಾಕರಿಸಿದೆ. ಈ ಕುರಿತು ನಿರ್ದಿಷ್ಟ ಪ್ರಕರಣದ ಸತ್ಯಾಂಶಗಳಿಲ್ಲದೆ ಸಾಮಾನ್ಯ ಮಾರ್ಗಸೂಚಿಗಳನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ವಿಪಕ್ಷಗಳ ದೂರೇನು?: ವಿಪಕ್ಷ ನಾಯಕರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದಂಥ (ಇಡಿ) ತನಿಖಾ ಸಂಸ್ಥೆಗಳನ್ನು ಏಕಪಕ್ಷೀಯವಾಗಿ ಬಳಸಲಾಗುತ್ತಿದೆ. ಹೀಗಾಗಿ ತನಿಖಾಧಿಕಾರಿಗಳಿಂದ ಬಂಧನ, ವಶಕ್ಕೆ ಪಡೆಯುವ ಮತ್ತು ಜಾಮೀನು ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದು ಕೋರಿ ವಿಪಕ್ಷಗಳು ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದವು.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರಿದ್ದ ನ್ಯಾಯಪೀಠದ ಮುಂದೆ ಈ ಅರ್ಜಿ ಇಂದು ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ, ''ಸಾಮೂಹಿಕ ಬಂಧನಗಳು ಪ್ರಜಾಪ್ರಭುತ್ವಕ್ಕೆ ಅಪಾಯ. ಇದು ಸರ್ವಾಧಿಕಾರಿತ್ವದ ಸಂಕೇತ. ನಿತ್ಯವೂ ಇಂಥ ಪ್ರಕರಣಗಳ ಮೇಲೆ ಹೋರಾಟ ನಡೆಸುತ್ತಿದ್ದರೆ, ಪ್ರಜಾಪ್ರಭುತ್ವ ಎಲ್ಲಿರುತ್ತದೆ'' ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ನ್ಯಾಯಪೀಠ, "ನಿರ್ದಿಷ್ಟ ಪ್ರಕರಣದ ಸತ್ಯಾಂಶಗಳಿಲ್ಲದೇ ನಾವು ಸಾಮಾನ್ಯ ಮಾರ್ಗಸೂಚಿಗಳನ್ನು ಹೊರಡಿಸುವುದು ಅಪಾಯಕಾರಿ ಬೆಳವಣಿಗೆಯಾಗುತ್ತದೆ" ಎಂದು ಹೇಳಿತು. ಅಲ್ಲದೇ, ''ವೈಯಕ್ತಿಕ ಕ್ರಿಮಿನಲ್ ಪ್ರಕರಣ ಅಥವಾ ಇಂತಹ ಪ್ರಕರಣಗಳ ಗುಂಪನ್ನು ಹೊಂದಿದ್ದಾಗ ಪುನಃ ನಮ್ಮ ಬಳಿಗೆ ಬನ್ನಿ'' ಎಂದು ಸಲಹೆ ನೀಡಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿತು. ಹೀಗಾಗಿ, ಪ್ರತಿಪಕ್ಷಗಳು ತಮ್ಮ ಮನವಿ ಹಿಂಪಡೆದಿವೆ.

ಇದನ್ನೂ ಓದಿ:1,600 ಕೋಟಿ ರೂ.ಗೆ ಏರ್ ಇಂಡಿಯಾ ಕಟ್ಟಡ ಖರೀದಿಸಲಿದೆ ಮಹಾರಾಷ್ಟ್ರ ಸರ್ಕಾರ

ರಾಜಕಾರಣಿಗೆ ಹೆಚ್ಚಿನ ಹೆಚ್ಚಿನ ವಿನಾಯಿತಿ ಇಲ್ಲ:ಹೊಸ ಮಾರ್ಗಸೂಚಿ ಪ್ರಕಟಿಸುವ ಸಂಬಂಧ ಅರ್ಜಿಯಲ್ಲಿದ್ದ ಮನವಿ ಗಮನಿಸಿದ ನ್ಯಾಯಪೀಠ, ''ರಾಜಕೀಯ ನಾಯಕರು ಸಾಮಾನ್ಯ ನಾಗರಿಕರಿಗಿಂತ ಹೆಚ್ಚಿನ ವಿನಾಯಿತಿ ಅನುಭವಿಸುವುದಿಲ್ಲ. ರಾಜಕಾರಣಿಗಳೂ ಸಹ ಜನಸಾಮಾನ್ಯರಂತೆ ಸಂಪೂರ್ಣವಾಗಿ ಒಂದೇ ಕಾನೂನಿನಡಿ ಇರುತ್ತಾರೆ'' ಎಂದು ಹೇಳಿತು.

2014ರಿಂದ 2022ರವರೆಗೆ ನಡೆದ ಸಿಬಿಐ ಮತ್ತು ಇಡಿ ಪ್ರಕರಣಗಳನ್ನು ಉಲ್ಲೇಖಿಸಿದ ಸಿಂಘ್ವಿ, ''2014ರಿಂದ 2022ರ ಅವಧಿಯಲ್ಲಿ 121 ರಾಜಕೀಯ ನಾಯಕರ ವಿರುದ್ಧ ಇಡಿ ತನಿಖೆ ಮಾಡಿದೆ. ಇದರಲ್ಲಿ ಶೇ.95ರಷ್ಟು ಪ್ರತಿಪಕ್ಷಕ್ಕೆ ಸೇರಿದವರು ಆಗಿದ್ದಾರೆ. ಹಾಗೆಯೇ, 124 ಜನರ ವಿರುದ್ಧ ಸಿಬಿಐ ತನಿಖೆ ಕೈಗೊಂಡಿದ್ದು, ಈ ಪೈಕಿ 108 ಮಂದಿ ಪ್ರತಿಪಕ್ಷಕ್ಕೆ ಸೇರಿದ್ದಾರೆ'' ಎಂದು ಹೇಳಿ ನ್ಯಾಯ ಪೀಠದ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಆಗ ನ್ಯಾಯಪೀಠವು, ''ಸಂವಿಧಾನದ ಪರಿಚ್ಛೇದ 19(1)(ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಅಡಿಯಲ್ಲಿ ಮಾಧ್ಯಮಗಳು ಕೂಡ ಹೆಚ್ಚಿನ ಅಧಿಕಾರ ಹೊಂದಿಲ್ಲ. ರಾಜಕೀಯ ವ್ಯಕ್ತಿಗಳು ಸಹ ನಾಗರಿಕರೇ. ನಾಗರಿಕರಾಗಿ ಅವರೂ ಸಹ ಇದೇ ರೀತಿಯ ನಿಯಮಗಳಿಗೆ ಒಳಪಟ್ಟಿರುತ್ತಾರೆ'' ಎಂದು ಸ್ಪಷ್ಪಪಡಿಸಿತು.

ಈ ಸಂದರ್ಭದಲ್ಲಿ ''ನಾವು ಯಾವುದೋ ಒಂದು ಪ್ರತ್ಯೇಕ ಅಥವಾ ಪಕ್ಷದ ಪರವಾಗಿ ನಿರ್ದಿಷ್ಟವಾದ ಪರಿಹಾರವನ್ನು ಕೇಳುತ್ತಿಲ್ಲ. ದೇಶದ ಚುನಾಯಿತ ಶೇ.42ರಷ್ಟು ಪ್ರತಿನಿಧಿಗಳು ಬಂಧನದ ಪೂರ್ವ ಮತ್ತು ನಂತರದ ಕಾರ್ಯ ವಿಧಾನಗಳ ಬಗ್ಗೆ ನಿರೀಕ್ಷಿತ ಮಾರ್ಗಸೂಚಿಗಳನ್ನು ಕೇಂದ್ರ ತನಿಖಾ ಸಂಸ್ಥೆಗಳು ಅಳವಡಿಸಿಕೊಳ್ಳಬೇಕೆಂದು ಬಯಸಿದ್ದಾರೆ'' ಎಂದು ವಕೀಲ ಸಿಂಘ್ವಿ ಹೇಳಿದರು.

ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದ ಪಕ್ಷಗಳು:ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ ಸಂಬಂಧ ಕಾಂಗ್ರೆಸ್​, ಡಿಎಂಕೆ, ಆರ್​ಜೆಡಿ, ಬಿಆರ್​ಎಸ್​, ತೃಣಮೂಲ ಕಾಂಗ್ರೆಸ್​, ಆಪ್​, ಎನ್​ಸಿಪಿ, ಉದ್ಧವ್​ ಠಾಕ್ರೆ ನೇತೃತ್ವದ ಶಿವಸೇನೆ, ಜೆಎಂಎಂ, ಜೆಡಿಯು, ಸಿಪಿಐ (ಎಂ), ಸಿಪಿಐ, ಸಮಾಜವಾದಿ ಪಕ್ಷ ಮತ್ತು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಅರ್ಜಿ ಸಲ್ಲಿಸಿತ್ತು.

Last Updated : Apr 5, 2023, 5:31 PM IST

ABOUT THE AUTHOR

...view details