ಮನುಷ್ಯನಂತೆ ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ತಮ್ಮ ತಮ್ಮ ಆವಾಸ ಸ್ಥಾನಗಳಲ್ಲಿ ನೆಮ್ಮದಿಯಿಂದ ಬದುಕುವ ಪ್ರಾಣಿಗಳ ಸ್ವಾತಂತ್ರ್ಯವನ್ನು ಮನುಷ್ಯ ಬಲವಂತವಾಗಿ ಕಿತ್ತುಕೊಳ್ಳುವ ಆರಂಭವಾಗಿ ಶತಮಾನಗಳೇ ಕಳೆದಿವೆ. ಅಷ್ಟು ಮಾತ್ರವಲ್ಲದೇ ಭೂಮಿಯನ್ನು ವಿಷದ ತಟ್ಟೆಯನ್ನಾಗಿ ಮಾರ್ಪಾಡು ಮಾಡಿ, ಪ್ರಾಣಿಗಳ ಜೀವಕ್ಕೂ ಸಂಚಕಾರ ತರುತ್ತಿದ್ದಾನೆ.
ಅಭಿವೃದ್ಧಿ, ತಂತ್ರಜ್ಞಾನ ಮುಂತಾದ ಹೆಸರಿನಲ್ಲಿ ಅಕ್ಷರಶಃ ಭೂಮಿಯನ್ನು ಕಸದ ಡಬ್ಬಿಯನ್ನಾಗಿ ಪರಿವರ್ತನೆ ಮಾಡುತ್ತಿರುವ ಮನುಷ್ಯನ ಕ್ರೂರತ್ವಕ್ಕೆ ಸಾಕ್ಷಿ ಬೇಕಾದರೆ, ನೀವೊಮ್ಮೆ ಶ್ರೀಲಂಕಾದ ಅಂಪಾರಾ ಜಿಲ್ಲೆಯ ಅವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕಿದೆ.
ಪಾಲ್ಲಕ್ಕಾಡು ಎಂಬ ಗ್ರಾಮದ ಬಳಿ ಎಂಟು ವರ್ಷದ ಅವಧಿಯಲ್ಲಿ ಸುಮಾರು 20 ಕಾಡಾನೆಗಳು ಮೃತಪಟ್ಟಿವೆ. ಅವು ಮೃತಪಟ್ಟಿರುವುದು ತ್ಯಾಜ್ಯವನ್ನು ಸೇವಿಸಿ ಎಂಬುದು ಅತ್ಯಂತ ಆಘಾತಕಾರಿ ಸಂಗತಿ. ಕಾಡಿನೊಳಗೆ ತ್ಯಾಜ್ಯವನ್ನು ಸರ್ಕಾರ ಸುರಿದಿದ್ದು, ಇದೇ ತ್ಯಾಜ್ಯವನ್ನು ಸೇವಿಸಿ ಆನೆಗಳು ಮೃತಪಟ್ಟಿವೆ.
ಆನೆಯ ಹೊಟ್ಟೆಯಲ್ಲಿ ಕೆಜಿಗಟ್ಟಲೇ ಪ್ಲಾಸ್ಟಿಕ್:ವಾರದ ಹಿಂದೆ ಎರಡು ಆನೆಗಳು ಮೃತಪಟ್ಟಿರುವುದು ಆತಂಕಕ್ಕೀಡು ಮಾಡಿದೆ. ಮರಣೋತ್ತರ ಪರೀಕ್ಷೆ ನಡೆಸಿದಾಗ ಅವುಗಳ ಹೊಟ್ಟೆಯಲ್ಲಿ ಇದ್ದದ್ದು, ಕೆಜಿಗಟ್ಟಲೇ ಪ್ಲಾಸ್ಟಿಕ್. ಶ್ರೀಲಂಕಾದಲ್ಲಿ ನೂರಾರು ತ್ಯಾಜ್ಯ ಡಂಪ್ಗಳಿವೆ. ಆದರಲ್ಲಿ ಸುಮಾರು 54 ತ್ಯಾಜ್ಯ ಡಂಪ್ ಪ್ರದೇಶಗಳು ವನ್ಯಜೀವಿ ವಲಯಗಳ ಸಮೀಪದಲ್ಲಿವೆ. ಸುಮಾರು 300 ಆನೆಗಳು ಅವುಗಳ ತ್ಯಾಜ್ಯ ಡಂಪ್ಗಳ ಬಳಿ ಸುತ್ತಾಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಪ್ಲಾಸ್ಟಿಕ್ ಮಾತ್ರ ಪತ್ತೆಯಾಗಿರಲಿಲ್ಲ. ಪಾಲಿಥಿನ್, ಆಹಾರ ಪೊಟ್ಟಣಗಳ ಕವರ್ಗಳು ಕೂಡಾ ಪತ್ತೆಯಾಗಿದ್ದವು. ಆನೆಯೊಂದು ಸೇವಿಸಿ, ಜೀರ್ಣಿಸಿಕೊಳ್ಳಬಹುದಾದ ಗಿಡಮರಗಳ ಎಲೆಗಳಂಥಹ ಯಾವುದೇ ಅಂಶ ಪತ್ತೆಯಾಗಿರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ತ್ಯಾಜ್ಯ ಆನೆಗಳ ಮೇಲೆ ಬೀರಿದ ಪರಿಣಾಮ ಎಂಥದ್ದು ಎಂಬುದನ್ನು ನಾವು ಊಹಿಸಿಕೊಳ್ಳಬಹುದಾಗಿದೆ.