ಜೋಧ್‌ಪುರ: ಬೀದಿ ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯ ಖ್ಯಾತ ಪ್ಲಾಸ್ಟಿಕ್ ಸರ್ಜನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಕಾರು ಚಾಲಕನೊಬ್ಬ ನಾಯಿಯ ಕತ್ತಿಗೆ ಸರಪಳಿ ಬಿಗಿದು ಕಾರಿಗೆ ಕಟ್ಟಿಕೊಂಡು ರಸ್ತೆ ಮೇಲೆ ಕ್ರೂರಿಯಂತೆ ಎಳೆದುಕೊಂಡು ಹೋಗಿದ್ದು, ನಾಯಿಯ ಒಂದು ಕಾಲಿನ ಮೂಳೆ ಮುರಿದಿದೆ. ಇನ್ನೊಂದು ಕಾಲಿಗೆ ಗಾಯವಾಗಿದ್ದು, ಕುತ್ತಿಗೆ ಭಾಗಕ್ಕೂ ನೋವಾಗಿದೆ. ವಿಡಿಯೋ ನೋಡಿದ ಪ್ರಾಣಿ ಪ್ರಿಯರು ಸೇರಿದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಖಂಡನೆ ವ್ಯಕ್ತಪಡಿಸಿದ್ದು, ಡಾಗ್ ಹೋಮ್ ಫೌಂಡೇಶನ್‌ನ ಕೇರ್‌ಟೇಕರ್ ಈ ಕುರಿತು ದೂರು ನೀಡಿದ್ದಾರೆ.
ಇದನ್ನೂ ಓದಿ:ಕಾರಿಗೆ ನಾಯಿಯನ್ನು ಕಟ್ಟಿ ಎಳೆದೊಯ್ದು ಕ್ರೌರ್ಯ: ವೈರಲ್ ವಿಡಿಯೋ
"ಡಾ.ರಜನೀಶ್ ಗಾಲ್ವಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 428 (ಪ್ರಾಣಿಗಳನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ಕಿಡಿಗೇಡಿತನ) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11 (ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಶಾಸ್ತ್ರಿನಗರ ಎಸ್‌ಎಚ್‌ಒ ಜೋಗೇಂದ್ರ ಸಿಂಗ್ ಹೇಳಿದ್ದಾರೆ.
ಇನ್ನೊಂದೆಡೆ, "ಗಾಲ್ವಾ ಅವರಿಗೆ 24 ಗಂಟೆಯೊಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ" ಎಂದು ಎಸ್‌ಎನ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಮತ್ತು ನಿಯಂತ್ರಕ ಡಾ.ದಿಲೀಪ್ ಕಚವಾಹ ತಿಳಿಸಿದ್ದಾರೆ.