ನವದೆಹಲಿ:ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಈಗಾಗಲೇ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಿದೆ. ಆದರೆ ಇದು ಕಡ್ಡಾಯವಾಗಿ ಜಾರಿಯಾಗದ ಕಾರಣ ಜುಲೈ 1ರಿಂದ ಈ ನಿಯಮ ಪಾಲನೆ ಮಾಡಲು ತಾಕೀತು ಮಾಡಿದೆ. ಇದದಿಂದ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳಾದ ಪ್ಲೇಟ್, ಕಪ್, ಸ್ಟ್ರಾ ಮತ್ತು ಟ್ರೇಗಳು ಕಣ್ಮರೆಯಾಗಲಿವೆ. ಹಾಲಿನ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್ ಅನ್ನು ಅನಿವಾರ್ಯವಾಗಿ ಬಳಕೆ ಮಾಡಬೇಕಾಗಿದ್ದು, ಈ ನಿಯಮದಲ್ಲಿ ರಿಯಾಯಿತಿ ನೀಡಬೇಕು ಎಂದು ಅಮೂಲ್ ಸಂಸ್ಥೆ ಕೇಂದ್ರವನ್ನು ಕೋರಿದೆ.
ಸ್ಟ್ರಾಗೆ ಪರ್ಯಾಯ ಏನು?:ದೇಶದಲ್ಲಿ ಪ್ಲಾಸ್ಟಿಕ್ ಸ್ಟ್ರಾಗಳ ಬಳಕೆ ಅಗಾಧವಾಗಿರುವುದು ಗೊತ್ತೇ ಇದೆ. ಅಮುಲ್ ಜೊತೆಗೆ ಪೆಪ್ಸಿ, ಕೋಕಾ ಕೋಲಾದಂತಹ ಕಂಪನಿಗಳು ಪ್ರತಿ ವರ್ಷ ನೂರಾರು ಮಿಲಿಯನ್ ಪ್ಲಾಸ್ಟಿಕ್ ಸ್ಟ್ರಾಗಳನ್ನು ಬಳಸುತ್ತವೆ. ಹಾಲು ಮತ್ತು ಹಣ್ಣಿನ ರಸದ ಮಾರಾಟದಲ್ಲಿ ಪ್ಲಾಸ್ಟಿಕ್ ಸ್ಟ್ರಾಗಳು ಅನಿವಾರ್ಯವಾಗಿವೆ. ಇದಕ್ಕಾಗಿ ಅಮುಲ್ ಮತ್ತು ಪಾರ್ಲೆ ಕಂಪನಿಗಳು ಈ ನಿಯಮವನ್ನು ಮುಂದೂಡಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿವೆ.
ಪ್ಲಾಸ್ಟಿಕ್ ಸ್ಟ್ರಾಗಳಿಗೆ ಪರ್ಯಾಯವಾಗಿ ಪೇಪರ್ ಸ್ಟ್ರಾಗಳ ಪರಿಚಯಿಸಲಾದರೂ, ಅವು ದೇಶೀಯ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯಾಗುತ್ತಿಲ್ಲ. ಪೇಪರ್ ಸ್ಟ್ರಾಗಳನ್ನು ಹೆಚ್ಚಾಗಿ ಚೀನಾದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದು ದುಬಾರಿಯಾಗಿದ್ದು, ಶೇ.250ರಷ್ಟು ಹೆಚ್ಚುವರಿ ಹಣ ನೀಡಬೇಕಾಗುತ್ತದೆ. ಪೇಪರ್ ಸ್ಟ್ರಾಗಳ ಬಳಕೆಯಿಂದ ಉತ್ಪನ್ನಗಳ ಮೇಲೆ 10 ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ ಎಂಬುದು ಕಂಪನಿಗಳ ದೂರು.
ಭಾರತದಲ್ಲಿ ಏಕಬಳಕೆ ಪ್ಲಾಸ್ಟಿಕ್ ಪ್ರಮಾಣ ಹೆಚ್ಚಾಗಿದೆ. ಪ್ರತಿ ವರ್ಷ 80 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮುದ್ರದಲ್ಲಿ ಸುರಿಯಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದು ಸಾಗರ ಜೀವಿಗಳ ಉಳಿವಿಗೆ ಅಪಾಯವಾಗಿ ಪರಿಣಮಿಸಿದೆ. ಹೀಗಾಗಿ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಬಿಗಿ ಕ್ರಮದ ಭಾಗವಾಗಿ ಜುಲೈ 1 ರಿಂದಲೇ ಈ ನಿಯಮ ಜಾರಿಗೆ ಬರಲಿದೆ. ಮತ್ತೊಂದೆಡೆ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳ ಬಳಕೆಯ ಮೇಲೂ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ.
ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ