ನವದೆಹಲಿ : ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೊಸದಾಗಿ ಬಿಡುಗಡೆ ಮಾಡಿರುವ ಕೋವಿಡ್ -19 ಚಿಕಿತ್ಸಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಡಲಾಗಿದೆ.
ಈ ಮೊದಲು ಬಿಡುಗಡೆ ಮಾಡಿದ್ದ ಐಸಿಎಂಆರ್ ಮಾರ್ಗಸೂಚಿಯಲ್ಲಿ, ರೆಮ್ಡೆಸಿವಿರ್, ಟೊಸಿಲಿಜುಮಾಬ್ ಹಾಗೂ ಕನ್ವೆಲೆಸೆಂಟ್ ಪ್ಲಾಸ್ಮಾವನ್ನು ಅಗ್ಯವಿದ್ದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲು ಸಲಹೆ ನೀಡಲಾಗಿತ್ತು.
ಮೇ 14ರಂದು ಐಸಿಎಂಆರ್-ರಾಷ್ಟ್ರೀಯ ಕಾರ್ಯಪಡೆ ಸಭೆ ನಡೆಸಿದ್ದವು. ಹಲವಾರು ಪ್ರಕರಣಗಳಲ್ಲಿ ಪ್ಲಾಸ್ಮಾ ಥೆರಪಿಯು ಪರಿಣಾಮಕಾರಿಯಾಗಿಲ್ಲದರ ಕುರಿತು ಚರ್ಚಿಸಲಾಗಿತ್ತು.
ಪ್ಲಾಸ್ಮಾ ದಾನಿಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ, ಕೋವಿಡ್ ಉಲ್ಬಣಗೊಂಡಿರುವ ಈ ವೇಳೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಪರಿಣಾಮಕಾರಿತ್ವದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದರು.
ಐಸಿಎಂಆಆರ್ನ ನೂತನ ಕೋವಿಡ್ -19 ಚಿಕಿತ್ಸಾ ಮಾರ್ಗಸೂಚಿ ಇದನ್ನೂ ಓದಿ: ಪ್ಲಾಸ್ಮಾ ದಾನ ಮಾಡುವುದರಿಂದ ಕೋವಿಡ್ ಸೋಂಕು ಹರಡುವುದಿಲ್ಲ: ವೈದ್ಯರ ಸ್ಪಷ್ಟನೆ
ಸಭೆ ಬಳಿಕ ನಿರ್ಧಾರ ಕೈಗೊಂಡಿರುವ ಐಸಿಎಂಆರ್, ಟೊಸಿಲಿಜುಮಾಬ್ ಹಾಗೂ ರೆಮ್ಡೆಸಿವಿರ್ ಚುಚ್ಚುಮದ್ದುಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಲು ಮುಂದುವರೆಸಲು ಅನುಮತಿ ನೀಡಿದ್ದು, ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿದೆ.
ಪ್ಲಾಸ್ಮಾ ಚಿಕಿತ್ಸೆ ಎಂದರೇನು?
'ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ' ಎಂದು ಕರೆಯಲ್ಪಡುವ ಪ್ಲಾಸ್ಮಾ ಚಿಕಿತ್ಸೆಯು ಕೋವಿಡ್ ಸೋಂಕಿಗೆ ಚಿಕಿತ್ಸೆ ನೀಡುವ ಪ್ರಾಯೋಗಿಕ ವಿಧಾನವಾಗಿದೆ.
ಈ ಚಿಕಿತ್ಸೆಯಲ್ಲಿ, ರಕ್ತದಲ್ಲಿನ ಹಳದಿ ಬಣ್ಣದ ದ್ರವದ ಅಂಶವಾದ ಪ್ಲಾಸ್ಮಾವನ್ನು ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಿಂದ ಹೊರತೆಗೆಯಲಾಗುತ್ತದೆ ಮತ್ತು ಸೋಂಕಿನಿಂದ ಬಳಲುತ್ತಿರುವ ರೋಗಿಗೆ ವರ್ಗಾಯಿಸಲಾಗುತ್ತದೆ.
ಹೀಗಾಗಿ, ಗುಣಮುಖರಾದವರು ಮುಂದೆ ಬಂದು ಸೋಂಕಿತರಿಗೆ ತಮ್ಮ ಪ್ಲಾಸ್ಮಾ ದಾನ ಮಾಡುವಂತೆ ದೇಶಾದ್ಯಂತ ಅನೇಕ ವೈದ್ಯರು ಮನವಿ ಮಾಡುತ್ತಿದ್ದಾರೆ. ಹಲವು ಆಸ್ಪತ್ರೆಗಳಲ್ಲಿ ಅನೇಕ ಕೊರೊನಾ ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗಿಸಲಾಗಿದೆ.