ನವದೆಹಲಿ:ಸಿಂಗಲ್ ಡೋಸ್ ಕೊರೊನಾ ಲಸಿಕೆ ಸ್ಪುಟ್ನಿಕ್ ಲೈಟ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಪರಿಚಯಿಸುವ ಯೋಜನೆಯಿದೆ ಎಂದು ಭಾರತದ ರಷ್ಯಾ ರಾಯಭಾರಿ ಎನ್ ಕುಡಾಶೇವ್ ಹೇಳಿದರು.
ಭಾರತದ ರಷ್ಯಾ ರಾಯಭಾರಿ ನಿಕೋಲಾಯ್ ಕುಡಾಶೇವ್, "ಸ್ಪುಟ್ನಿಕ್ ವಿ ರಷ್ಯನ್-ಭಾರತೀಯ ಲಸಿಕೆ. ಭಾರತದಲ್ಲಿ ಇದರ ಉತ್ಪಾದನೆಯನ್ನು ಕ್ರಮೇಣ ವರ್ಷಕ್ಕೆ 850 ಮಿಲಿಯನ್ ಡೋಸ್‌ಗಳವರೆಗೆ ಹೆಚ್ಚಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ. ಸಿಂಗಲ್ ಡೋಸ್ ಕೊರೊನಾ ಲಸಿಕೆ ಸ್ಪುಟ್ನಿಕ್ ಲೈಟ್ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ" ಎಂದು ಹೇಳಿದರು.
"ಸ್ಪುಟ್ನಿಕ್ ವಿ ಯ ಪರಿಣಾಮಕಾರಿತ್ವವು ಪ್ರಪಂಚದಲ್ಲಿ ಚಿರಪರಿಚಿತವಾಗಿದೆ. ರಷ್ಯಾದಲ್ಲಿ, 2020 ರ ದ್ವಿತೀಯಾರ್ಧದಿಂದ ನಾಗರಿಕರಿಗೆ ಲಸಿಕೆ ನೀಡಲು ಇದನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. ಹೊಸ ಕೊರೊನಾ ತಳಿಗಳ ವಿರುದ್ಧವೂ ಇದು ಪರಿಣಾಮಕಾರಿ ಎಂದು ರಷ್ಯಾದ ತಜ್ಞರು ಘೋಷಿಸಿದ್ದಾರೆ" ಎಂದು ಅವರು ತಿಳಿಸಿದರು.
ರಷ್ಯಾ ಅಭಿವೃದ್ಧಿಪಡಿಸಿರುವ ಕೋವಿಡ್–19 ವಿರುದ್ಧದ ಲಸಿಕೆ ‘ಸ್ಪುಟ್ನಿಕ್ ವಿ’ ಮುಂದಿನ ವಾರದಿಂದ ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆಮದಾಗುವ ಲಸಿಕೆಯ ಪ್ರತಿ ಡೋಸ್‌ಗೆ 995.40 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಡಾ.ರೆಡ್ಡಿಸ್ ಲ್ಯಾಬೊರೇಟರೀಸ್ ಲಿಮಿಟೆಡ್ ಗುರುವಾರ ತಿಳಿಸಿದೆ.