ಕಾನ್ಪುರ್(ಉತ್ತರ ಪ್ರದೇಶ):ಸಮಾಜವಾದಿ ಪಕ್ಷದ ನಾಯಕ ಮತ್ತು ಉದ್ಯಮಿಯಾಗಿರುವ ಪಿಯೂಷ್ ಜೈನ್ ಅವರ ಮನೆ, ಕಾರ್ಖಾನೆ ಮತ್ತು ಇತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣವನ್ನು ಈಗಾಗಲೇ ಜಪ್ತಿ ಮಾಡಿದ್ದಾರೆ. ಇದರ ಮಧ್ಯೆ ಮತ್ತೊಂದು ಅಚ್ಚರಿಯ ಸುದ್ದಿ ಹೊರಬಿದ್ದಿದೆ.
ನೂರಾರು ಕೋಟಿ ರೂ. ಒಡೆಯನಾಗಿದ್ದ ಪಿಯೂಷ್ ಜೈನ್ ತಮ್ಮ ಮನೆಯಿಂದ ಕನೌಜ್ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಲು ಹಳೇ ಕಾಲದ ಸ್ಕೂಟರ್ ಬಳಸುತ್ತಿದ್ದರಂತೆ. ಮನೆಯ ಹೊರಗಡೆ ಕ್ವಾಲಿಸ್ ಹಾಗೂ ಮಾರುತಿ ಕಾರು ಇದ್ದರೂ, ಹಳೆಯ ಸ್ಕೂಟರ್ನಲ್ಲೇ ತೆರಳುತ್ತಿದ್ದರು. ಜೊತೆಗೆ ರಬ್ಬರ್ ಚಪ್ಪಲಿ ಧರಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಸ್ಕೂಟರ್ ಪಿಯೂಷ್ ಜೈನ್ ಅವರಿಗೆ ಮದುವೆ ಸಂದರ್ಭದಲ್ಲಿ ಪತ್ನಿ ಮನೆಯವರು ಉಡುಗೊರೆಯಾಗಿ ನೀಡಿದ್ದರೆಂದು ತಿಳಿದುಬಂದಿದೆ.
ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಅಧಿಕಾರಿಗಳು ಅವರ ಮನೆಯ ಮೇಲೆ ದಾಳಿ ನಡೆಸಿದಾಗ 250 ಕೋಟಿ ರೂ. ನಗದು, 23 ಕೆಜಿ ಚಿನ್ನ ವಶಕ್ಕೆ ಪಡೆದುಕೊಂಡಿದ್ದರು. ಇಂದು ಕೂಡ ಅವರ ಕಂಪನಿ ಮೇಲೆ ದಾಳಿ ನಡೆಸಿದಾಗ 17 ಕೋಟಿ ರೂ. ನಗದು ಹಾಗೂ 600 ಕೆಜಿ ಶ್ರೀಗಂಧದ ತೈಲ ಪತ್ತೆಯಾಗಿದೆ. ಪಿಯೂಷ್ ಜೈನ್ ಸುಗಂಧ ದ್ರವ್ಯ ತಯಾರಿಸುವ ಕಲೆಯನ್ನ ಅವರ ತಂದೆಯಿಂದ ಕರಗತ ಮಾಡಿಕೊಂಡಿದ್ದರು. ಆರಂಭದಲ್ಲಿ ಕಾನ್ಪುರ್ದಲ್ಲಿ ಸುಗಂಧ ದ್ರವ್ಯ ವ್ಯಾಪಾರ ಆರಂಭ ಮಾಡಿದ್ದ ಇವರು, ಕಳೆದ 15ವರ್ಷಗಳಲ್ಲಿ ದೇಶದ ಹಲವು ಭಾಗಗಳಿಗೆ ಅದರ ವಿಸ್ತರಣೆ ಮಾಡಿದ್ದಾರೆ. ಮುಂಬೈ ಹಾಗೂ ಗುಜರಾತ್ನಲ್ಲಿ ಭರ್ಜರಿ ವ್ಯಾಪಾರ ನಡೆಸಿದ್ದರು.