ವೈಶಾಲಿ (ಬಿಹಾರ): ಬಿಹಾರದಲ್ಲಿ ಮತ್ತೊಂದು ಸೇತುವೆ ಕೊಚ್ಚಿಕೊಂಡು ಹೋಗಿದೆ. ಭಾಗಲ್ಪುರ ಜಿಲ್ಲೆಯಲ್ಲಿ ಇತ್ತೀಚಿಗೆ ಬಹುಕೋಟಿ ವೆಚ್ಚದ ನಿರ್ಮಾಣದ ಹಂತದ ಸೇತುವೆ ಕುಸಿದು ಬಿದ್ದಿತ್ತು. ಇದೀಗ ವೈಶಾಲಿ ಜಿಲ್ಲೆಯಲ್ಲಿ ಪಿಪಾ ಸೇತುವೆಯ ಒಂದು ಭಾಗವು ಭಾರಿ ಮಳೆ ಮತ್ತು ಬಿರುಗಾಳಿಗೆ ಗಂಗಾ ನದಿಯಲ್ಲಿ ಕೊಚ್ಚಿಹೋಗಿದೆ. ಇದರಿಂದ ರಘೋಪುರ ಭಾಗದ ಜನತೆ ಸಂಪರ್ಕ ಕಡಿದುಕೊಂಡಿದ್ದಾರೆ.
ವೈಶಾಲಿ ಜಿಲ್ಲಾ ಕೇಂದ್ರದಿಂದ ರಘೋಪುರಕ್ಕೆ ಸಂಪರ್ಕ ಕಲ್ಪಿಸಲು ಗಂಗಾ ನದಿಗೆ ಅಡ್ಡಲಾಗಿ ತಾತ್ಕಾಲಿಕವಾದ ಈ ಪಿಪಾ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಮಳೆ ಜೊತೆಗೆ ಬಲವಾದ ಗಾಳಿಗೆ ಅದು ಕೊಚ್ಚಿಕೊಂಡು ಹೋಗಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇತುವೆ ದಾಟುತ್ತಿದ್ದರು. ಏಕಾಏಕಿ ಉಂಟಾದ ಅವಘಡದಿಂದ ಜನರು ನದಿಯ ಮಧ್ಯದಲ್ಲೇ ಸಿಲುಕಿಕೊಂಡಿದ್ದರು. ಬಳಿಕ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಿದೆ.
ಈ ಬಾರಿ ಪಿಪಾ ಸೇತುವೆಯನ್ನು ಕಳೆದ ಫೆಬ್ರವರಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೆರೆಯಲಾಗಿತ್ತು. ಆದರೆ, ಐದು ತಿಂಗಳ ಅಂತರದಲ್ಲೇ ಸೇತುವೆ ಒಂದು ಭಾಗ ನೀರುಪಾಲಾಗಿದೆ. ರಘೋಪುರಕ್ಕೆ ಇದೊಂದೇ ಸಂಚಾರ ಮಾರ್ಗವಾಗಿದೆ. ಆದರೆ, ಗಂಗಾ ನದಿಯಲ್ಲಿ ನೀರಿನ ಮಟ್ಟದ ಹೆಚ್ಚಾಗಿದ್ದು, ದೋಣಿ ಮೂಲಕ ಪ್ರಯಾಣಿಸುವುದು ಅಪಾಯದ ಸ್ಥಿತಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.