ಕಣ್ಣೂರು(ಕೇರಳ): ಕಣ್ಣೂರಿನಲ್ಲಿ ಶನಿವಾರ ನಡೆದ 23ನೇ ಸಿಪಿಐ(ಎಂ) ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಭಾರತದ ಮುಖ್ಯಮಂತ್ರಿಗಳ ಜೀವನಾಡಿ. ಕಮ್ಯುನಿಸ್ಟ್ ಸಿದ್ಧಾಂತಕ್ಕೂ ಅವರಿಗೂ ನಿಕಟ ಸಂಪರ್ಕವಿದೆ ಎಂದು ಹೇಳಿದ್ದಾರೆ. ಸಭೆಗೆ ಹಾಜರಾಗುವಂತೆ ಸಿಎಂ ಹೇಳಿದಾಗ ನಾನು ಒಪ್ಪಿಕೊಂಡೆ. ಹಲವು ಕಾರಣಗಳಿಗಾಗಿ ಭಾಗವಹಿಸುವುದು ನನ್ನ ಕರ್ತವ್ಯವಾಗಿತ್ತು ಎಂದು ಸ್ಟಾಲಿನ್ ಇದೆ ವೇಳೆ ತಿಳಿಸಿದರು.
ಕಣ್ಣೂರು ಕಮ್ಯುನಿಸ್ಟ್ ಹುತಾತ್ಮರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ನಾಡು, ನನಗೆ ಪಿಣರಾಯಿ ವಿಜಯನ್ ಮಾರ್ಗದರ್ಶಕರು. ಪಿಣರಾಯಿ ವಿಜಯನ್ ಒಂದು ಕಡೆ ಹೋರಾಟದ ಮನೋಭಾವದಿಂದ ಮತ್ತೊಂದೆಡೆ ಕಲ್ಯಾಣ ಚಟುವಟಿಕೆಗಳಿಂದ ಕೆಲಸ ಮಾಡುತ್ತಿದ್ದಾರೆ. ಮಾರ್ಕ್ಸ್ವಾದ ಮತ್ತು ದ್ರಾವಿಡ ಕಲ್ಪನೆಗಳ ನಡುವೆ ಆಳವಾದ ಸಂಬಂಧವಿದೆ ಎಂದು ತಿಳಿಸಿದರು. ರಾಜ್ಯಗಳನ್ನು ಕೇಂದ್ರ ಸರ್ಕಾರ ರಕ್ಷಿಸಬೇಕು. ಆದರೆ, ಬ್ರಿಟಿಷರ ಆಳ್ವಿಕೆಯಲ್ಲಿಯೂ ಮಾಡದ ಕೆಲಸವನ್ನು ಬಿಜೆಪಿ ಸರ್ಕಾರ ಈಗ ಮಾಡುತ್ತಿದೆ. ರಾಜ್ಯಗಳಿಗೆ ತೊಂದರೆ ನೀಡಲು ಪ್ರಯತ್ನಿಸುವ ಮೂಲಕ ಬಿಜೆಪಿ ಜನರಿಗೆ ನೋವುಂಟು ಮಾಡುತ್ತಿದೆ ಎಂದು ಹರಿಹಾಯ್ದರು.