ತಿರುವನಂತಪುರಂ:ಏಕರೂಪ ನಾಗರಿಕ ಸಂಹಿತೆ (UCC)ಯ ಬಗ್ಗೆ ಕಾಂಗ್ರೆಸ್ ಪಕ್ಷದ ಮೌನವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಪ್ರಶ್ನಿಸಿದ್ದಾರೆ. ಯುಸಿಸಿ ವಿಚಾರದಲ್ಲಿ ಕಾಂಗ್ರೆಸ್ ಅನುಮಾನಾಸ್ಪದ ಮೌನವಹಿಸಿದ್ದು, ಸಂಘ ಪರಿವಾರ ವಿರುದ್ಧ ದೃಢವಾದ ನಿಲುವು ತೆಗೆದುಕೊಳ್ಳುವುದೇ ಎಂದು ಪ್ರಶ್ನಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಏಕರೂಪ ನಾಗರಿಕ ಸಂಹಿತೆ ಕುರಿತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸ್ಪಷ್ಟ ನಿಲುವನ್ನು ಹೊಂದಿದೆಯೇ ಎಂದು ಕೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ನ ಅನುಮಾನಾಸ್ಪದ ಮೌನವು ಮೋಸದಾಯಕ. ಭಾರತದ ಬಹುತ್ವದ ಮೇಲೆ ಸಂಘಪರಿವಾರದ ಹೇರಿಕೆಗಳನ್ನು ವಿರೋಧಿಸಲು ಮತ್ತು ಸಂಘಪರಿವಾರದ ವಿರುದ್ಧ ದೃಢವಾದ ನಿಲುವು ತೆಗೆದುಕೊಳ್ಳಲು ಕಾಂಗ್ರೆಸ್ ಸಿದ್ಧವಾಗಿದೆಯೇ?. ಚುನಾವಣಾ ರಾಜಕೀಯದಲ್ಲಿ ಬಿಜೆಪಿಯನ್ನು ವಿರೋಧಿಸುವುದನ್ನು ಹೊರತುಪಡಿಸಿ, ದೇಶದ ಉಳಿವಿನ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ ಸಂಘಪರಿವಾರದ ವಿರುದ್ಧ ನಿಲ್ಲಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ ಎಂದು ಟೀಕಿಸಿದ್ದಾರೆ.
ಈ ವಿಚಾರವಾಗಿ ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಪ್ರತಿಕ್ರಿಯೆ ನೀಡಿ, ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ, ನಾವು ವೈವಿಧ್ಯತೆಯ ಏಕರೂಪತೆಯನ್ನು ಒಪ್ಪುವುದಾಗಿ ಹೇಳಿದ್ದೇವೆ. ಹಾಗಾಗಿ ಯಾವುದೇ ಕಾನೂನು ಜಾರಿಗೆ ತರುವ ಮೊದಲು ಈ ಕಾನೂನು ತಮಗೆ ವಿರುದ್ಧ ಎಂದು ಯಾರಿಗೂ ಅನಿಸಬಾರದು. ಎಲ್ಲ ಪಕ್ಷಗಳ ನಡುವೆ ದೃಢವಾದ ಒಮ್ಮತ ಮೂಡಬೇಕು. ಈ ವಿಚಾರದಲ್ಲಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬೇಕು ಎಂದು ಹೇಳುವ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಹೇಳಿದ್ದರು. ಆದರೆ, ಈ ವಿಚಾರದಲ್ಲಿ ಪಕ್ಷದ ತೀರ್ಮಾನದಂತೆ ಹೋಗುತ್ತೇನೆ ಎಂದೂ ತಿಳಿಸಿದ್ದರು.