ರಾಜ್‌ಕೋಟ್, ಗುಜರಾತ್: ಪ್ರಸಿದ್ಧ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮತ್ತೊಮ್ಮೆ ಸುದ್ದಿಯಲ್ಲಿದೆ. ಪೈಲಟ್ (ಏರ್ ಇಂಡಿಯಾ ಪೈಲಟ್) ವಿಮಾನವನ್ನು ಟೇಕ್ ಆಫ್ ಮಾಡಲು ನಿರಾಕರಿಸಿದಾಗ ನೂರಾರು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಬೇಕಿದ್ದ ವಿಮಾನದಲ್ಲಿ ಈ ಪರಿಸ್ಥಿತಿ ಉಂಟಾಗಿದೆ. ಆ ವೇಳೆ ಪ್ರಯಾಣಿಕರಲ್ಲಿ ಮೂವರು ಬಿಜೆಪಿ ಸಂಸದರೂ ಇದ್ದರು ಎಂಬುದು ಗಮನಾರ್ಹ. ಭಾನುವಾರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಏರ್ ಇಂಡಿಯಾ ವಿಮಾನವು ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದಿಂದ ರಾತ್ರಿ 8.30 ಕ್ಕೆ ದೆಹಲಿಗೆ ಟೇಕ್ ಆಫ್ ಆಗಬೇಕಿತ್ತು. ಆದರೆ ಪೈಲಟ್ ವಿಮಾನವನ್ನು ಟೇಕ್ ಆಫ್ ಮಾಡಲು ನಿರಾಕರಿಸಿದರು. ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ನಿಯಮಗಳ ಪ್ರಕಾರ, ವಿಮಾನ ಟೇಕ್ ಆಫ್ ಮಾಡಲು ತನ್ನ ಕೆಲಸದ ಸಮಯವನ್ನು ಮೀರಿ ಕೆಲಸ ಮಾಡುತ್ತಿದ್ದೇನೆ ಎಂದು ಪೈಲಟ್ ಸಸೇಮಿರಾ ಹೇಳಿದ್ದಾರೆ.
ಇದರಿಂದ ರಾಜ್‌ಕೋಟ್ ಸಂಸದ ಮೋಹನ್ ಕುಂದರಿಯಾ, ಜಾಮ್‌ನಗರ ಸಂಸದೆ ಪೂನಂ ಮತ್ತು ರಾಜ್ಯಸಭಾ ಸಂಸದ ಕೇಸರಿದೇವ್ ಸಿನ್ಹ್ ಝಾಲಾ ಸೇರಿದಂತೆ ನೂರಾರು ಪ್ರಯಾಣಿಕರು ತೀವ್ರ ಆತಂಕಗೊಂಡಿದ್ದರು. ಪೈಲಟ್ ವಿಮಾನ ಟೇಕ್ ಆಫ್ ಮಾಡಲು ನಿರಾಕರಿಸಿದ್ದರಿಂದ ವಿಮಾನ ನಿಲ್ದಾಣದಲ್ಲಿ ಅತ್ಯಂತ ಗೊಂದಲಮಯ ವಾತಾವರಣ ನಿರ್ಮಾಣಗೊಂಡಿತ್ತು.
ಏರ್ ಇಂಡಿಯಾ ಉತ್ತರವೇನು?:ಈ ಘಟನೆಯ ಬಗ್ಗೆ ಏರ್ ಇಂಡಿಯಾ ವಿವರಣೆ ನೀಡಿದೆ. ಕಾರ್ಯಾಚರಣೆಯ ಕಾರಣಗಳಿಂದ ವಿಮಾನ ವಿಳಂಬವಾಗಿದೆ ಎಂದು ಅದು ಹೇಳಿದೆ. “ನಿಯಂತ್ರಕ ಸಂಸ್ಥೆಯ ನಿಯಮಗಳ ಪ್ರಕಾರ.. ಅವರು ಕರ್ತವ್ಯದ ಸಮಯದ ಮಿತಿಯನ್ನು ಮೀರಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅನುಮತಿಸುವುದಿಲ್ಲ. ಅದರಲ್ಲಿ ಯಾವುದೇ ರಾಜಿ ಇಲ್ಲ. ತುರ್ತಾಗಿ ತಮ್ಮ ಗಮ್ಯಸ್ಥಾನಗಳನ್ನು ತಲುಪಬೇಕಾದವರಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಉಳಿದವರಿಗೆ ಹೋಟೆಲ್ನಲ್ಲಿ ಸೌಲಭ್ಯ ಕಲ್ಪಿಸಿದ್ದೇವೆ. ಯಾರಾದರೂ ಟಿಕೆಟ್ ಕ್ಯಾನ್ಸಲ್ ಮಾಡಿದರೆ... ಪೂರ್ತಿ ಹಣ ವಾಪಸ್ ನೀಡಲು ಅವಕಾಶ ಕಲ್ಪಿಸಿದ್ದೇವೆ' ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.