ಜೈಪುರ (ರಾಜಸ್ಥಾನ):ರಾಜಸ್ಥಾನದ ಉಪಮುಖ್ಯಮಂತ್ರಿಗಳಾಗಿ ದಿಯಾ ಕುಮಾರಿ ಮತ್ತು ಪ್ರೇಮ್ಚಂದ್ ಬೈರವ ಅವರು ಪ್ರಮಾಣವಚನ ಸ್ವೀಕರಿಸಿದ್ದನ್ನು ಪ್ರಶ್ನಿಸಿ ಶನಿವಾರ ರಾಜಸ್ಥಾನ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ. ಡಿಸಿಎಂ ಹುದ್ದೆ ಅಸಂವಿಧಾನಿಕ ಹಾಗೂ ಸಂವಿಧಾನವು ಈ ಹುದ್ದೆಗೆ ಮಾನ್ಯತೆ ನೀಡುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ವಕೀಲ ಓಂಪ್ರಕಾಶ್ ಸೋಲಂಕಿ ಎಂಬುವವರು ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಉಪ ಮುಖ್ಯಮಂತ್ರಿಗಳಾದ ದಿಯಾ ಕುಮಾರಿ ಮತ್ತು ಪ್ರೇಮ್ಚಂದ್ ಬೈರವ ಅವರನ್ನು ಕಕ್ಷಿದಾರರನ್ನಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಈ ಪಿಐಎಲ್ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಈ ಹುದ್ದೆಗಳಿಗೆ ನೇಮಕವನ್ನು ರದ್ದುಗೊಳಿಸುವಂತೆ ಕೋರಿರುವ ವಕೀಲ ಸೋಲಂಕಿ, ಉಪಮುಖ್ಯಮಂತ್ರಿ ಹುದ್ದೆ ಅಸಂವಿಧಾನಿಕ ಮತ್ತು ಸಂವಿಧಾನದಲ್ಲಿ ಅಂತಹ ಯಾವುದೇ ಹುದ್ದೆಯನ್ನು ಉಲ್ಲೇಖಿಸಿಲ್ಲ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಉನ್ನತ ನಾಯಕರ ಸಮ್ಮುಖದಲ್ಲಿ ಬಿಜೆಪಿ ನಾಯಕ ಭಜನ್ ಲಾಲ್ ಶರ್ಮಾ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಇದೇ ಸಮಾರಂಭದಲ್ಲಿ ದಿಯಾ ಕುಮಾರಿ ಮತ್ತು ಪ್ರೇಮ್ಚಂದ್ ಬೈರವ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಸಮಂದ್ ಸಂಸದೆಯಾಗಿದ್ದ ದಿಯಾ ಕುಮಾರಿ ಪಕ್ಷದಲ್ಲಿ ರಜಪೂತ ಸಮುದಾಯ ಪ್ರಮುಖ ನಾಯಕಿ ಆಗಿದ್ದಾರೆ. ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಜೈಪುರದ ವಿದ್ಯಾಧರ್ ನಗರ ಕ್ಷೇತ್ರದಿಂದ 71,368 ಮತಗಳ ಅಂತರದಿಂದ ಗೆದ್ದಿದ್ದಾರೆ.