ಕರ್ನಾಟಕ

karnataka

ETV Bharat / bharat

ಗುರುತಿನ ಪುರಾವೆ ಇಲ್ಲದೆ 2 ಸಾವಿರದ ನೋಟು ಬದಲಾವಣೆ ಬೇಡ: ಹೈಕೋರ್ಟ್​​ನಲ್ಲಿ ಪಿಐಎಲ್​​ ದಾಖಲು

ಯಾವುದೇ ಗುರುತಿನ ಪುರಾವೆ ಇಲ್ಲದೆ 2 ಸಾವಿರ ರೂಪಾಯಿಯ ಕರೆನ್ಸಿ ನೋಟುಗಳ ಬದಲಾವಣೆಗೆ ಅವಕಾಶ ನೀಡಬಾರದು ಎಂದು ಕೋರಿ ದೆಹಲಿ ಹೈಕೋರ್ಟ್​ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ.

PIL in HC against exchange of Rs 2000 banknote without requisition slip, identity proof
PIL in HC against exchange of Rs 2000 banknote without requisition slip, identity proof

By

Published : May 22, 2023, 3:40 PM IST

ನವದೆಹಲಿ : ಯಾವುದೇ ವಿನಂತಿ ಅರ್ಜಿ (requisition slip) ಅಥವಾ ಗುರುತಿನ ಪುರಾವೆ ಇಲ್ಲದೆಯೇ 2000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಿದ್ದನ್ನು ವಿರೋಧಿಸಿ ದೆಹಲಿ ಹೈಕೋರ್ಟ್​ನಲ್ಲಿ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ನೋಟು ಬದಲಾಯಿಸಲು ಯಾವುದೇ ಗುರುತಿನ ಪುರಾವೆ ಅಗತ್ಯ ಇರುವುದಿಲ್ಲ ಎಂದು ಹೇಳಿರುವ ಎಸ್​ಬಿಐ ಮತ್ತು ಆರ್​ಬಿಐ ಸುತ್ತೋಲೆಯು ಕಾನೂನುಬಾಹಿರವಾಗಿದ್ದು, ಭಾರತದ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ತಮ್ಮ ಪಿಐಎಲ್​ ಅರ್ಜಿಯಲ್ಲಿ ಹೇಳಿದ್ದಾರೆ.

ಸಾರ್ವಜನಿಕ ವ್ಯಕ್ತಿಗಳ ಲಾಕರ್‌ನಲ್ಲಿ ದೊಡ್ಡ ಮೊತ್ತದ ಕರೆನ್ಸಿ ಜಮೆಯಾಗಿರುತ್ತದೆ ಅಥವಾ ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು, ಮಾವೋವಾದಿಗಳು, ಮಾದಕವಸ್ತು ಕಳ್ಳಸಾಗಣೆದಾರರು, ಗಣಿಗಾರಿಕೆ ಮಾಫಿಯಾಗಳು ಮತ್ತು ಭ್ರಷ್ಟರು ಇಂಥ ಹಣವನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮೌಲ್ಯದ ಕರೆನ್ಸಿಯಲ್ಲಿ ನಗದು ವಹಿವಾಟು ಭ್ರಷ್ಟಾಚಾರದ ಮುಖ್ಯ ಮೂಲವಾಗಿದೆ ಮತ್ತು ಭಯೋತ್ಪಾದನೆ, ನಕ್ಸಲಿಸಂ, ಪ್ರತ್ಯೇಕತಾವಾದ, ಮೂಲಭೂತವಾದ, ಜೂಜು, ಕಳ್ಳಸಾಗಣೆ, ಅಕ್ರಮ ಹಣ ವರ್ಗಾವಣೆ, ಅಪಹರಣ, ಸುಲಿಗೆ, ಲಂಚ ಮತ್ತು ವರದಕ್ಷಿಣೆ ಇತ್ಯಾದಿ ಕಾನೂನುಬಾಹಿರ ಚಟುವಟಿಕೆಗಳಿಗೆ ಇದನ್ನು ಬಳಸಲಾಗುತ್ತದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. ಹೀಗಾಗಿ 2000 ರೂಪಾಯಿಯ ನೋಟುಗಳನ್ನು ಆಯಾ ಬ್ಯಾಂಕ್ ಖಾತೆಗಳಲ್ಲಿ ಮಾತ್ರ ಠೇವಣಿ ಮಾಡುವಂತೆ ಆರ್​ಬಿಐ ಮತ್ತು ಎಸ್​ಬಿಐ ನಿಯಮ ಜಾರಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

"ಪ್ರತಿ ಕುಟುಂಬವು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎಂದು ಕೇಂದ್ರವು ಘೋಷಿಸಿದೆ. ಹೀಗಿರುವಾಗ ಗುರುತಿನ ಪುರಾವೆಗಳನ್ನು ಪಡೆಯದೇ 2000 ರೂಪಾಯಿಗಳ ನೋಟುಗಳನ್ನು ಬದಲಾಯಿಸಲು ಆರ್‌ಬಿಐ ಏಕೆ ಅನುಮತಿ ನೀಡುತ್ತಿದೆ. 80 ಕೋಟಿ ಬಿಪಿಎಲ್ ಕುಟುಂಬಗಳು ಉಚಿತ ಧಾನ್ಯಗಳನ್ನು ಪಡೆಯುತ್ತವೆ ಎಂಬುದು ಸಹ ಇಲ್ಲಿ ಗಮನಾರ್ಹ. ಇದರರ್ಥ 80 ಕೋಟಿ ಭಾರತೀಯರು 2,000 ರೂಪಾಯಿಗಳ ನೋಟುಗಳನ್ನು ಅಪರೂಪವಾಗಿ ಬಳಸುತ್ತಾರೆ. ಆದ್ದರಿಂದ, ಅರ್ಜಿದಾರರು ಆರ್‌ಬಿಐ ಮತ್ತು ಎಸ್‌ಬಿಐಗೆ 2000 ರೂಪಾಯಿಗಳ ನೋಟುಗಳನ್ನು ಬ್ಯಾಂಕ್ ಖಾತೆಗೆ ಮಾತ್ರ ಠೇವಣಿ ಮಾಡುವಂತೆ ಕ್ರಮ ತೆಗೆದುಕೊಳ್ಳುವಂತೆ ಕೋರುತ್ತೇವೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

2000 ರೂಪಾಯಿ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡುವುದರಿಂದ ಕಪ್ಪುಹಣ ಮತ್ತು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವವರನ್ನು ಸುಲಭವಾಗಿ ಗುರುತಿಸಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮೇ 19 ರಂದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಲಾವಣೆಯಲ್ಲಿರುವ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಚಲಾವಣೆಯಲ್ಲಿರುವ ಅಸ್ತಿತ್ವದಲ್ಲಿರುವ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಬಹುದು ಅಥವಾ ಸೆಪ್ಟೆಂಬರ್ 30 ರೊಳಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಅದು ಹೇಳಿದೆ.

2,000 ಮುಖಬೆಲೆಯ ಬ್ಯಾಂಕ್ ನೋಟುಗಳು ಕಾನೂನುಬದ್ಧ ಕರೆನ್ಸಿಗಳಾಗಿ ಮುಂದುವರಿಯುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಮೇ 23 ರಿಂದ ಯಾವುದೇ ಬ್ಯಾಂಕ್‌ನಲ್ಲಿ ರೂ 2,000 ಬ್ಯಾಂಕ್ ನೋಟುಗಳನ್ನು ಇತರ ಮುಖಬೆಲೆಯ ಬ್ಯಾಂಕ್ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಹೇಳಿದೆ. ಯಾವುದೇ ವಿನಂತಿ ಅರ್ಜಿಯನ್ನು ಪಡೆಯದೆಯೇ ಸಾರ್ವಜನಿಕರಿಂದ 20,000 ರೂಪಾಯಿಗಳ ಮಿತಿಯವರೆಗೆ 2,000 ರೂಪಾಯಿಗಳ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ಅನುಮತಿಸಲಾಗುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಎಲ್ಲಾ ಸ್ಥಳೀಯ ಮುಖ್ಯ ಕಚೇರಿಗಳ ಮುಖ್ಯ ಜನರಲ್ ಮ್ಯಾನೇಜರ್‌ ಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಿದೆ. ಅಲ್ಲದೆ ವಿನಿಮಯದ ಸಮಯದಲ್ಲಿ ಸಾರ್ವಜನಿಕರು ಯಾವುದೇ ಗುರುತಿನ ಪುರಾವೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ :ಜೀವಿಗಳ ಅಸ್ತಿತ್ವಕ್ಕೇ ಕುತ್ತು ತರಲಿದೆ ಹವಾಮಾನ ಬದಲಾವಣೆ: ಅಧ್ಯಯನ ವರದಿ

ABOUT THE AUTHOR

...view details