ನವದೆಹಲಿ :ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಕಾನೂನಿನ ಕಾರ್ಯಾಚರಣೆಯಲ್ಲಿ ಒಮ್ಮೆ ಸಂಸತ್ತಿನ ಸದಸ್ಯ ಸ್ಥಾನವನ್ನು ಹಾಗೂ ರಾಜ್ಯ ಶಾಸಕಾಂಗದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡರೆ, ಅವರ ಮೇಲೆ ಹೊರಿಸಲಾದ ಆರೋಪಗಳಿಂದ ಖುಲಾಸೆಗೊಳ್ಳುವವರೆಗೂ ಅವರನ್ನು ಅನರ್ಹಗೊಳಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ.
ಲಖನೌ ಮೂಲದ ವಕೀಲ ಹಾಗೂ ಅರ್ಜಿದಾರರಾದ ಅಶೋಕ್ ಪಾಂಡೆ ಅವರು, ಕಾನೂನಿನ ಪ್ರಕಾರ ತೀರ್ಪು ಹೊರ ಬಂದ ಬಳಿಕ ಅನರ್ಹಗೊಂಡ ವ್ಯಕ್ತಿಯೂ ಸಂಸತ್ತಿನ ಸದಸ್ಯ ಸ್ಥಾನದಲ್ಲಿ ಹಾಗೂ ರಾಜ್ಯ ಶಾಸಕಾಂಗದಲ್ಲಿ ತಮ್ಮ ಸ್ಥಾನವನ್ನು ಮುಂದುವರೆಸಲು ಅರ್ಹರಾಗುತ್ತಾರೆಯೇ? ಎಂಬುದನ್ನು ನಿರ್ಧರಿಸುವಂತೆ ಪೀಠಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಮೋದಿ ಉಪನಾಮಕ್ಕೆ ಸಂಬಂಧಿಸಿದ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಶಿಕ್ಷೆಗೆ ಆಗಸ್ಟ್ 4 ರಂದು ಸುಪ್ರೀಂಕೊರ್ಟ್ ತಡೆ ನೀಡಿತ್ತು. ಸೂರತ್ ಕೆಳ ನ್ಯಾಯಾಲಯ ನೀಡಿದ ತೀರ್ಪಿನಿಂದ ರಾಹುಲ್ ಗಾಂಧಿ ತಮ್ಮ ಲೋಕಸಭಾ ಸದಸ್ಯ ಸ್ಥಾನವನ್ನು ಕಳೆದುಕೊಂಡಿದ್ದರು. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಗರಿಷ್ಠ ಎರಡು ವರ್ಷ ಶಿಕ್ಷೆ ವಿಧಿಸಿರುವುದಕ್ಕೆ ಗುಜರಾತ್ ನ್ಯಾಯಾಲಯದ ನ್ಯಾಯಾಧೀಶರು ಯಾವುದೇ ಕಾರಣಗಳನ್ನು ನೀಡಿರಲಿಲ್ಲ, ಹೀಗಾಗಿ ಪೀಠ, ಮುಂದಿನ ವಿಚಾರಣೆವರೆಗೂ ಶಿಕ್ಷೆಗೆ ಮಧ್ಯಂತರ ತಡೆ ನೀಡಿ ಆದೇಶ ನೀಡಿತ್ತು.
ಸುಪ್ರೀಂ ಕೋರ್ಟ್ನ ತಡೆಯಾಜ್ಞೆಯ ನಂತರ ಆಗಸ್ಟ್ 7ರಂದು ಲೋಕಸಭೆಯ ಕಾರ್ಯದರ್ಶಿ ಪುನಃ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವವನ್ನು ಮರು ಸ್ಥಾಪನೆ ಮಾಡಲಾಗಿತ್ತು. 2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾಡಿದ ಭಾಷಣದಲ್ಲಿ, ಕಳ್ಳರೆಲ್ಲರಿಗೂ ಮೋದಿ ಉಪನಾಮ ಏಕಿರುತ್ತದೆ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಈ ಹೇಳಿಕೆಯಿಂದ ಮೋದಿ ಸಮುದಾಯಕ್ಕೆ ಅವಮಾನವಾಗಿದೆ ಎಂದು ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಎಂಬವರು ಸೂರತ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.