ಕಂಧಮಾಲ್ (ಒಡಿಶಾ):ಕಲಿಕೆಗೆ ವಯಸ್ಸು, ಸ್ಥಾನಮಾನ ಸೇರಿದಂತೆ ಯಾವುದೂ ಅಡ್ಡಿಯಲ್ಲ. ಒಡಿಶಾದ ಫುಲ್ಭಾನಿಯ ಶಾಸಕ ಅಂಗದ ಕನ್ಹರ್ ಇದನ್ನು ಮಾಡಿ ತೋರಿಸಿದ್ದಾರೆ. ತಮ್ಮ 58ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದು ಓದು ಅರ್ಧಕ್ಕೆ ನಿಲ್ಲಿಸಿದ್ದ ಅನೇಕರು ಮತ್ತು ಇತರೆ ಅನಕ್ಷರಸ್ಥ ಜನಪ್ರತಿನಿಧಿಗಳಿಗೆ ಈ ಎಂಎಲ್ಎ ಮಾದರಿಯಾಗಿದ್ದಾರೆ.
ಒಡಿಶಾದಲ್ಲಿ ಶುಕ್ರವಾರದಿಂದ 10ನೇ ತರಗತಿ ಅಥವಾ ಪ್ರೌಢಶಾಲಾ ಪ್ರಮಾಣಪತ್ರ (ಎಚ್ಎಸ್ಸಿ) ಅಂತಿಮ ಪರೀಕ್ಷೆಗಳು ಆರಂಭವಾಗಿವೆ. ಜನಪ್ರತಿನಿಧಿಗಳು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರಾಗಿ ತೆರಳಿ ಪರಿಶೀಲನೆ ನಡೆಸುವುದು ಸಾಮಾನ್ಯ. ಆದರೆ, ಆಡಳಿತಾರೂಢ ಬಿಜೆಡಿ ಶಾಸಕ ಅಂಗದ ಕನ್ಹರ್ ಮಕ್ಕಳಂತೆ ಹಾಲ್ ಟಿಕೆಟ್ ಪಡೆದು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದರು.