ಮುಂಬೈ:ಕಬ್ಬಡಿ ಕಾರ್ಯಕ್ರಮದ ಪೋಸ್ಟರ್ನಲ್ಲಿ ಗ್ಯಾಂಗ್ಸ್ಟರ್ ಛೋಟಾ ರಾಜನ್ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿ ಪೋಸ್ಟರ್ ಹಾಕಿರುವ ಘಟನೆ ಮುಂಬೈನ ಮಲಡ್ನಲ್ಲಿ ನಡೆಸಿದೆ. ಈ ಸಂಬಂಧ ಕಬ್ಬಡಿ ಕಾರ್ಯಕ್ರಮ ಆಯೋಜಕರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಮಲಡ್ ಪ್ರದೇಶದಲ್ಲಿ ಇದೇ ಜನವರಿ 14 ಮತ್ತು 15ರಂದು ನಡೆಯಲಿರುವ ಕಬ್ಬಡಿ ಕಾರ್ಯಕ್ರಮ ಆಯೋಜಿಸಿದ್ದು, ಈ ಸಂಬಂಧ ಪೋಸ್ಟರ್ ಅನ್ನು ಅಳವಡಿಸಲಾಗಿತ್ತು. ಇದರಲ್ಲಿ ಸ್ವಾಗತಕೋರುವ ಬ್ಯಾನರ್ಲ್ಲಿ ಛೋಟಾ ರಾಜನ್ ಭಾವಚಿತ್ರವನ್ನು ದೊಡ್ಡದಾಗಿ ಅಳವಡಿಸಲಾಗಿದೆ. ನಗರದ ಹಲವು ಪ್ರದೇಶಗಳಲ್ಲಿ ಈ ಬ್ಯಾನರ್ ಅನ್ನು ಹಾಕಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಿಆರ್ ಸಮಜಿಕ್ ಸಂಘಟನಾ ಮಹಾರಾಷ್ಟ್ರ ರಾಜ್ಯ ಮುಂಬೈ ಈ ಬ್ಯಾನರ್ ಅನ್ನು ಅಳವಡಿಸಿದೆ. ಈ ಹಿನ್ನೆಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವರದಿಗಳ ಪ್ರಕಾರ, ಪೋಸ್ಟರ್ ಅನ್ನು ಹಾಕಲು ನಾಗರಿಕ ಮಂಡಳಿಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಪೋಸ್ಟರ್ ಅಳವಡಿಸಿದ ಕಾರಣ ಪೋಸ್ಟರ್ ಅನ್ನು ಥಾಣೆ ಮುನ್ಸಿಪಲ್ ಕಾರ್ಪೊರೇಶನ್ ತೆಗೆದುಹಾಕಿದೆ.
ಮಹಾರಾಷ್ಟ್ರದಲ್ಲಿ 13 ವರ್ಷಗಳ ಹಿಂದೆ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಕಳೆದ ನವೆಂಬರ್ನಲ್ಲಿ ಸಿಬಿಐ ಕೋರ್ಟ್ ಛೋಟಾ ರಾಜನ್ ಸೇರಿದಂತೆ ನಾಲ್ವರನ್ನು ಖುಲಾಸೆಗೊಳಿಸಿತ್ತು. ಸಾಕ್ಷ್ಯಾಧಾರ ಕೊರತೆ ಹಿನ್ನಲೆ ಅವರನ್ನು ಆರೋಪ ಮುಕ್ತರನ್ನಾಗಿ ಮಾಡಲಾಗಿತ್ತು. ಮುಂಬೈ ಸರಣಿ ಸ್ಪೋಟದ ಆರೋಪಿಯಾಗಿರುವ ಭೂಗತ ಪಾತಕಿ ಛೋಟಾ ರಜನ್ ಇಂಡೋನೇಷ್ಯಾದ ಬಾಲಿಯಿಂದ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.