ಕಾನ್ಪುರ (ಉತ್ತರಪ್ರದೇಶ) :ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳ ಕೋಚಿಂಗ್ ಹಬ್ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಸಾಲು ಸಾಲು ಸಾವು ದೇಶವನ್ನೇ ಬೆಚ್ಚಿಬೀಳಿಸಿದೆ. ಇದೀಗ ಆ ಸರಣಿ ಉತ್ತರಪ್ರದೇಶದ ಐಐಟಿ ಕಾನ್ಪುರದಲ್ಲಿ ಮುಂದುವರಿದಿದೆ. ಇಲ್ಲಿನ ಕ್ಯಾಂಪಸ್‌ನಲ್ಲಿ ಕೇವಲ 2 ತಿಂಗಳಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುರುವಾರ ಐಐಟಿ ಕಾನ್ಪುರದಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿ ಪ್ರಿಯಾಂಕಾ ಜೈಸ್ವಾಲ್ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸಂಸ್ಥೆಯಲ್ಲಾಗುತ್ತಿರುವ ಮೂರನೇ ಪ್ರಕರಣವಾಗಿದೆ. ಹಾಸ್ಟೆಲ್ ಸಂಖ್ಯೆ 4 ರಲ್ಲಿನ 312 ನೇ ಕೊಠಡಿಯಲ್ಲಿ ವಾಸವಿದ್ದ ಅವರು, ಗುರುವಾರ ಮಧ್ಯಾಹ್ನದ ವೇಳೆ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು, ಫೋರೆನ್ಸಿಕ್ ತಂಡ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಐಐಟಿ ಕಾನ್ಪುರದ ಪಿಎಚ್‌ಡಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಬಂದಿತು. ಕಿಟಕಿಯಿಂದ ಇಣುಕಿ ನೋಡಿದಾಗ ಆಕೆ ಶವವಾಗಿ ಪತ್ತೆಯಾಗಿದ್ದಾರೆ. ಕೊಠಡಿ ಮುಚ್ಚಲಾಗಿತ್ತು. ಫೋರೆನ್ಸಿಕ್ ಘಟಕವನ್ನು ಸ್ಥಳಕ್ಕೆ ಕರೆಸಲಾಯಿತು. ಕ್ಯಾಂಪಸ್‌ಗೆ ಸಿಬ್ಬಂದಿ ಕಳುಹಿಸಲಾಯಿತು. ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಣೆ ಮಾಡಿದ್ದಾರೆ. ತನಿಖೆಯ ಬಳಿಕ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣ ತಿಳಿಯಲಿದೆ. ಇದೇ ವೇಳೆ, ವಿದ್ಯಾರ್ಥಿನಿ ಸಾವಿನ ಬಗ್ಗೆ ಸಹ ವಿದ್ಯಾರ್ಥಿಗಳು ಮೌನವಾಗಿದ್ದಾರೆ. ಯಾರೂ ಏನನ್ನೂ ಹೇಳುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.