ಕೊಲ್ಲಂ (ಕೇರಳ) :ಕೇರಳದ ಯೋಧನ ಮೇಲೆ ಆರು ಜನರು ಹಲ್ಲೆ ಮಾಡಿ, ಬೆನ್ನಿನ ಮೇಲೆ ಪಿಎಫ್ಐ ಎಂದು ಬರೆಯಲಾಗಿದೆ ಎಂಬ ಆರೋಪ ಪ್ರಕರಣ ತಿರುವು ಪಡೆದುಕೊಂಡಿದೆ. ಘಟನೆಯ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಅಸಲಿ ಸತ್ಯವನ್ನು ಪತ್ತೆ ಮಾಡಿದ್ದು, ಇದೀಗ ಆರೋಪ ಮಾಡಿದ ಯೋಧ ಮತ್ತು ಆತನ ಸ್ನೇಹಿತನನ್ನು ಮಂಗಳವಾರ ಬಂಧಿಸಲಾಗಿದೆ.
ತನ್ನ ಮೇಲೆ ಹಲ್ಲೆ ಮಾಡಿ, ಬೆನ್ನ ಮೇಲೆ ನಿಷೇಧಿತ ಸಂಘಟನೆಯ ಹೆಸರು ಬರೆಯಲಾಗಿದೆ ಎಂದು ಆರೋಪ ಮಾಡಿದ್ದ ಯೋಧ ಮತ್ತು ಆತನ ಸ್ನೇಹಿತನೊಬ್ಬನನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಇಬ್ಬರೂ ನಾನಾ ಹೇಳಿಕೆ ನೀಡುತ್ತಿದ್ದಾರೆ. ವಿಚಾರಣೆ ನಡೆಸಲಾಗುತ್ತಿದೆ. ಯೋಧನ ದೇಹದ ಮೇಲೆ ಯಾವುದೇ ಹಲ್ಲೆ ಮಾಡಿದ ಗುರುತುಗಳಿಲ್ಲ. ಅವರ ಹೇಳಿಕೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು.
ಯೋಧನ ಸ್ನೇಹಿತ ಹೇಳಿದ್ದಿಷ್ಟು:'ತನ್ನ ರಜೆ ದಿನಗಳನ್ನು ಮುಗಿಸಿ ಹೊರಡಬೇಕಿತ್ತು. ಕೊನೆಯ ದಿನದಂದು ಮದ್ಯಕೂಟ ನಡೆಸಿದಾಗ ತಾನು ಖ್ಯಾತಿ ಗಳಿಸಬೇಕು ಹೇಳಿದ. ಅದಕ್ಕಾಗಿ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಸುದ್ದಿ ಹಬ್ಬಿಸಲು ಪ್ಲಾನ್ ಮಾಡಿದ. ಅದರಂತೆ ನನಗೆ ಹೊಡೆಯಲು ಕೇಳಿದ. ಆದರೆ, ನಾನು ಕುಡಿದ ಕಾರಣ ಸಾಧ್ಯವಿಲ್ಲ ಎಂದು ಹೇಳಿದೆ. ಆಗ ಆತನೇ ತನ್ನ ಬೆನ್ನ ಮೇಲೆ ಬರೆಯಲು ಹೇಳಿದ. ಮೊದಲು ನಾನು 'ಡಿಎಫ್ಐ' ಎಂದು ಬರೆದೆ. ಆದರೆ, ಆತನ 'ಪಿಎಫ್ಐ' ಎಂದು ಬರೆಯಲು ಹೇಳಿದ. ಅದರಂತೆಯೇ ನಾನು ಗೀಚಿದೆ'. ಹಲ್ಲೆ ಮಾಡಲು ಸಾಧ್ಯವಿಲ್ಲ ಎಂದಾಗ ಕೈ, ಬಾಯಿಗೆ ಟೇಪ್ನಿಂದ ಸುತ್ತಿ ಮನೆಯಾಚೆ ಎಳೆದು ಬಿಸಾಡಿ ಹೋಗಲು ಹೇಳಿದ. ಅದರಂತೆಯೇ ನಾನು ಮಾಡಿದೆ ಎಂದು ವಿಚಾರಣೆಯಲ್ಲಿ ಹೇಳಿದ್ದಾನೆ.