ಎರ್ನಾಕುಲಂ(ಕೇರಳ):ದೇಶದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿ ನಿಷೇಧಕ್ಕೊಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಕರ್ಮಕಾಂಡಗಳು ಬಗೆದಷ್ಟು ಹೊರಬರುತ್ತಿವೆ. ಪಿಎಫ್ಐ ಅನ್ಯಧರ್ಮಗಳ ಯುವಕರನ್ನು ಉಗ್ರ ಕೃತ್ಯಗಳಿಗೆ ನೇಮಿಸಿಕೊಳ್ಳುವ ರಹಸ್ಯ ವಿಭಾಗವನ್ನು ಹೊಂದಿದ್ದು, ಇದು ಎಫ್ಐ ಕಚೇರಿಯ ಹೊರಗೆ ಕೆಲಸ ಮಾಡುತ್ತಿತ್ತು ಎಂಬುದನ್ನು ರಾಷ್ಟ್ರೀಯ ತನಿಖಾ ದಳ ಪತ್ತೆ ಹಚ್ಚಿದೆ.
ಬಂಧಿತರಾಗಿರುವ ಪಿಎಫ್ಐ ಮುಖಂಡರ ನ್ಯಾಯಾಂಗ ಬಂಧನದ ಅವಧಿಯ ವಿಸ್ತರಣೆಗಾಗಿ ಸಲ್ಲಿಸಲಾದ ಅರ್ಜಿಯಲ್ಲಿ ಎನ್ಐಎ ಈ ಭಯಾನಕ ಅಂಶವನ್ನು ನ್ಯಾಯಾಲಯಕ್ಕೆ ತಿಳಿಸಿದೆ. ಮೂರು ತಿಂಗಳ ತನಿಖೆಯಲ್ಲಿ ಆಘಾತಕಾರಿ ಅಂಶಗಳು ಬಹಿರಂಗವಾಗಿವೆ ಎಂಬುದನ್ನು ಕೋರ್ಟ್ ಗಮನಕ್ಕೆ ತಂದಿದೆ.
ನಿಷೇಧಿತ ಪಿಎಫ್ಐ ದೇಶದಲ್ಲಿ ಆಂತರಿಕ ಗಲಭೆಗೆ ದೊಡ್ಡ ಸಂಚು ಹೂಡಿತ್ತು. ಅನ್ಯಧರ್ಮ ಗುರುಗಳನ್ನು ಗುರುತಿಸಿ ಹಿಟ್ ಲಿಸ್ಟ್ ತಯಾರಿಸಿದೆ. ಇದಕ್ಕಾಗಿ ಯುವಕರನ್ನು ನೇಮಕ ಮಾಡಿಕೊಂಡಿದೆ. ಇದು ಪಿಎಫ್ಐ ಕಚೇರಿಗಳ ಆಚೆ ನಡೆಯುತ್ತಿತ್ತು. ಇದಕ್ಕಾಗಿಯೇ ವಿಶೇಷ ಕಾರ್ಯಪಡೆ ರಚಿಸಿಕೊಳ್ಳಲಾಗಿತ್ತು. ಉಗ್ರ ಸಂಘಟನೆಯಾದ ಐಎಸ್ಐಎಸ್ನೊಂದಿಗೆ ಪಿಎಫ್ಐ ಸಂಪರ್ಕ ಹೊಂದಿದೆ ಎಂಬುದಕ್ಕೆ ಪುರಾವೆಗಳು ದೊರೆತಿವೆ. ಇನ್ನಷ್ಟು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್ಐಎ ತಿಳಿಸಿದೆ.