ಹೈದರಾಬಾದ್:ಪಂಚ ರಾಜ್ಯಗಳ ಚುನಾವಣೆ ಮುಕ್ತಾಯಗೊಳ್ಳಲು ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಇದರ ಮಧ್ಯೆ ಕಾಂಗ್ರೆಸ್ನ ಹಿರಿಯ ನಾಯಕ ರಾಹುಲ್ ಗಾಂಧಿ 'ತಕ್ಷಣವೇ ಪೆಟ್ರೋಲ್ ಟ್ಯಾಂಕ್ ತುಂಬಿಸಿಕೊಳ್ಳಿ' ಎಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ ಚುನಾವಣೆ ಘೋಷಣೆಯಾದಾಗಿನಿಂದಲೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಇದಕ್ಕೆ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿರುವುದೇ ಕಾರಣ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಎಲ್ಲ ರಾಜ್ಯಗಳ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದು, ಮತ್ತೊಮ್ಮೆ ತೈಲ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬರುವ ಸಾಧ್ಯತೆ ದಟ್ಟವಾಗಿದೆ. ಇದೇ ಕಾರಣಕ್ಕಾಗಿ ಮೋದಿ ಸರ್ಕಾರದ ಚುನಾವಣಾ ಆಫರ್ ಮುಗಿಯಲಿದ್ದು, ತಕ್ಷಣವೇ ಪೆಟ್ರೋಲ್ ಫುಲ್ ಮಾಡಿಕೊಳ್ಳಿ ಎಂದು ರಾಗಾ ಟ್ವೀಟ್ ಮಾಡಿದ್ದಾರೆ.
ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 120 ಡಾಲರ್ ಗಡಿ ದಾಟಿದೆ. ಇಷ್ಟಾದ್ರೂ ಕೂಡ ದೇಶದಲ್ಲಿ ತೈಲ ಬೆಲೆ ಏರಿಕೆಯಾಗಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ತೈಲ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇರುವ ಕಾರಣ ರಾಹುಲ್ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ.