ಚೆನ್ನೈ(ತಮಿಳುನಾಡು):ದಿನದಿಂದ ದಿನಕ್ಕೆ ಪೆಟ್ರೋಲ್ - ಡಿಸೇಲ್ ಬೆಲೆಯಲ್ಲಿ ದಾಖಲೆ ಪ್ರಮಾಣದ ಏರಿಕೆಯಾಗುತ್ತಿದ್ದು, ಇದರಿಂದ ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಇದರ ಮಧ್ಯೆ ಹೊಸದಾಗಿ ಸರ್ಕಾರ ರಚನೆ ಮಾಡಿರುವ ತಮಿಳುನಾಡು ಸರ್ಕಾರ ಅಲ್ಲಿನ ವಾಹನ ಸವಾರರಿಗೆ ಭರ್ಜರಿ ಗಿಫ್ಟ್ ನೀಡಿದೆ.
ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್ ನೇತೃತ್ವದ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ತೈಲ ಬೆಲೆ ಮೇಲಿನ ಅಬಕಾರಿ ಸುಂಕ(ಸೆಸ್) ಕಡಿಮೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಬಜೆಟ್ ಮಂಡನೆ ಮಾಡಿರುವ ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಈ ಮಾಹಿತಿ ನೀಡಿದ್ದು, ಹೀಗಾಗಿ ಪೆಟ್ರೋಲ್ ಮೇಲೆ 3 ರೂಪಾಯಿ ಇಳಿಕೆಯಾಗಲಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ 1,160 ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದು ತಿಳಿಸಿದರು.
ತಮಿಳುನಾಡು ಸರ್ಕಾರದಿಂದ ಬಜೆಟ್ ಮಂಡನೆ ಕಾಗದ ರಹಿತ ಬಜೆಟ್ ಮಂಡನೆ ಮಾಡಿರುವ ಹಣಕಾಸು ಸಚಿವರು, ರಾಜ್ಯ ಸರ್ಕಾರಿ ನೌಕರರಿಗೆ ಏಪ್ರಿಲ್ 2022 ರಿಂದ ಜಾರಿಗೊಳ್ಳುವಂತೆ ಡಿಎ ಹಾಗೂ ಮಹಿಳಾ ಪೌರ ಕಾರ್ಮಿಕರ ಹೆರಿಗೆ ರಜೆ 9 ತಿಂಗಳಿಂದ 12 ತಿಂಗಳಿಗೆ ವಿಸ್ತರಿಸುವುದಾಗಿ ತಿಳಿಸಿದರು. ಬಜೆಟ್ ಮಂಡನೆ ವೇಳೆ ಪ್ರತಿಪಕ್ಷಗಳು ಗದ್ದಲ ಮಾಡಿರುವ ಘಟನೆ ಸಹ ನಡೆದಿದೆ.
ಇದನ್ನೂ ಓದಿರಿ: IPL 2021: ದುಬೈಗೆ ಪ್ರಯಾಣ ಬೆಳೆಸಿದ ಧೋನಿ ನೇತೃತ್ವದ ಸಿಎಸ್ಕೆ ತಂಡ
ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಹರಿಯಾಣ, ಜಮ್ಮು - ಕಾಶ್ಮೀರ, ಒಡಿಶಾ, ಬಿಹಾರ, ಕೇರಳ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ತೈಲ ಬೆಲೆ ಈಗಾಗಲೇ 100ರ ಗಡಿ ದಾಟಿದೆ.ಕಳೆದ ಕೆಲ ತಿಂಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿ, ಸರ್ಕಾರ ರಚನೆ ಮಾಡಿದೆ.