ಹೈದರಾಬಾದ್ (ತೆಲಂಗಾಣ): ಸಾರ್ವಜನಿಕ ವಲಯದ ತೈಲ ಕಂಪನಿಗಳಿಂದ ವಿತರಕರಿಗೆ ಅನಿಯಮಿತ ಪೂರೈಕೆ, ರಾಜ್ಯಗಳಿಂದ ಹೆಚ್ಚಿದ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಜೊತೆಗೆ ದೇಶಾದ್ಯಂತ ಹಲವಾರು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಮೂಲಕ ಹಠಾತ್ ಬಿಕ್ಕಟ್ಟು ಉಂಟಾಗಿದೆ. ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸದಿದ್ದರೆ, ಬಿಕ್ಕಟ್ಟು ದೀರ್ಘಕಾಲದವರೆಗೆ ಪರಿಣಾಮ ಬೀರಬಹುದು ಎಂದು ಇಂಧನ ಪಂಪ್ ಮಾಲೀಕರು ಮತ್ತು ವಿತರಕರ ಸಂಘವು ಆತಂಕ ವ್ಯಕ್ತಪಡಿಸಿದೆ.
ಬಂಕ್ಗಳಲ್ಲಿ ಖಾಲಿಯಾದ ಇಂಧನ:ತೈಲದಲ್ಲಿನ ಬಿಕ್ಕಟ್ಟು ಸೀಮಿತ ಕ್ಷೇತ್ರಕ್ಕಷ್ಟೇ ನಿಂತಿಲ್ಲ, ಇದು ವ್ಯಾಪಕವಾಗಿ ಕೊರತೆಯನ್ನುಂಟು ಮಾಡುವ ಸಾಧ್ಯತೆಗಳಿವೆ. ದೇಶಾದ್ಯಂತ ಹಲವಾರು ಪೆಟ್ರೋಲ್ ಪಂಪ್‌ಗಳ ಮೇಲೆ ವ್ಯಾಪಕವಾದ ಪರಿಣಾಮ ಬೀರುತ್ತಿದೆ ಎಂಬ ಮಾಹಿತಿ ದೇಶದ ವಿವಿಧ ಭಾಗಗಳಿಂದ ಲಭ್ಯವಾಗಿದೆ ಎನ್ನಲಾಗಿದೆ. ಸೋಮವಾರ ಭೋಪಾಲ್‌ನ 152 ಪೆಟ್ರೋಲ್ ಪಂಪ್‌ಗಳಲ್ಲಿ 12 ರಲ್ಲಿ ಪೆಟ್ರೋಲ್ ಖಾಲಿ ಆಗಿತ್ತು. ಇಂಧನ ಕೊರತೆ ನಗರದಲ್ಲಿ ಮಾತ್ರವಲ್ಲದೇ ಕೋಕ್ಟಾ ಟ್ರಾನ್ಸ್‌ಪೋರ್ಟ್ ನಗರ, ನೀಲ್ಬಾದ್ ಮತ್ತು ಬೆರಾಸಿಯಾ ಪ್ರದೇಶಗಳು ಸೇರಿದಂತೆ ನಗರ ವ್ಯಾಪ್ತಿಯ ಹೊರಗಿನ ಬಂಕ್ಗಳಲ್ಲೂ ಕಂಡು ಬಂತು ಎಂದು ವರದಿಯಾಗಿದೆ.
ಹಿಮಾಚಲ ಪ್ರದೇಶದಲ್ಲೂ ಇದೇ ಪರಿಸ್ಥಿತಿ:ಹಿಮಾಚಲ ಪ್ರದೇಶದ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬ ಸುದ್ದಿ ಬಂದಿದೆ. ಇಲ್ಲಿನ 496 ಪೆಟ್ರೋಲ್ ಪಂಪ್‌ಗಳಲ್ಲಿ ಹಲವು ಇಂಧನ ಕೊರತೆಯಿಂದ ಸ್ಥಗಿತಗೊಂಡಿದ್ದವು. ಹಿಮಾಚಲ ಪ್ರದೇಶದ ಆಹಾರ ಸರಬರಾಜು ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಪ್ರತಿದಿನ ಸರಾಸರಿ 240 ಮೆಟ್ರಿಕ್ ಟನ್ ಪೆಟ್ರೋಲ್ ಮತ್ತು 1300 ಮೆಟ್ರಿಕ್ ಟನ್ ಡೀಸೆಲ್ ಅನ್ನು ಸೇವಿಸಲಾಗುತ್ತದೆ. ಮೂಲಗಳ ಪ್ರಕಾರ, IOCL (ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್) ಇಡೀ ರಾಜ್ಯದಲ್ಲಿ ಒಟ್ಟು ಬಳಕೆಯ ಶೇಕಡಾ 50 ರಷ್ಟು ಪೂರೈಸುತ್ತದೆ. ನಂತರ BPCL (ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಮತ್ತು HPCL (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಒಟ್ಟು ಪೂರೈಕೆಯ 24 ಪ್ರತಿಶತದಷ್ಟು ಕೊಡುಗೆ ನೀಡುತ್ತವೆ. 2ರಷ್ಟು ಇಂಧನ ಮಾತ್ರ ಖಾಸಗಿ ಕಂಪನಿಗಳಿಂದ ಪೂರೈಕೆಯಾಗುತ್ತಿದೆ.
ಇನ್ನು ರಾಜಸ್ಥಾನದಲ್ಲಿ ಎಚ್ಪಿ ಮತ್ತು ಬಿಪಿಸಿಎಲ್ನ ಸುಮಾರು 2500 ಪೆಟ್ರೋಲ್ ಪಂಪ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಇವುಗಳಲ್ಲಿ 2000 ಕ್ಕೂ ಹೆಚ್ಚು ಬಂಕ್ಗಳು ಕಾರ್ಯ ಸ್ಥಗಿತಗೊಳಿಸುವ ಅಂಚಿನಲ್ಲಿವೆ. ಐಒಸಿಎಲ್‌ನ 4000 ಪಂಪ್‌ಗಳಲ್ಲಿ ಪೂರೈಕೆ ಉತ್ತಮವಾಗಿ ನಡೆಯುತ್ತಿದ್ದರೂ, ರಾಜ್ಯದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ನಿಭಾಯಿಸಲು ಇವುಗಳಿಂದ ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.