ಇಂಫಾಲ್ (ಮಣಿಪುರ): ಗುರುವಾರ ತಡರಾತ್ರಿ ಇಂಫಾಲ್‌ನ ಕೊಂಗ್ಬಾದಲ್ಲಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆರ್.ಕೆ ರಂಜನ್ ಸಿಂಗ್ ಅವರ ನಿವಾಸಕ್ಕೆ ಗುಂಪೊಂದು ಬೆಂಕಿ ಹಚ್ಚಿದೆ ಎಂದು ಮಣಿಪುರ ಸರ್ಕಾರ ದೃಢಪಡಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಗ್,"ನಾನು ಸದ್ಯ ಅಧಿಕೃತ ಕೆಲಸಕ್ಕಾಗಿ ಕೇರಳದಲ್ಲಿದ್ದೇನೆ. ಅದೃಷ್ಟವಶಾತ್, ನಿನ್ನೆ ರಾತ್ರಿ ನನ್ನ ಇಂಫಾಲ್ ಮನೆಯಲ್ಲಿ ಯಾರೂ ಗಾಯಗೊಂಡಿಲ್ಲ. ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್‌ಗಳೊಂದಿಗೆ ಬಂದಿದ್ದರು ಮತ್ತು ನನ್ನ ಮನೆಯ ನೆಲ ಮಹಡಿ ಮತ್ತು ಮೊದಲ ಮಹಡಿಗೆ ಹಾನಿಯಾಗಿದೆ" ಎಂದು ತಿಳಿಸಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ಶಾಂತಿಗಾಗಿ ಮನವಿ ಮಾಡಿದ ಅವರು "ನನ್ನ ತವರು ರಾಜ್ಯದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುವುದು ತುಂಬಾ ದುಃಖಕರವಾಗಿದೆ. ನಾನು ಇನ್ನೂ ಶಾಂತಿಗಾಗಿ ಮನವಿ ಮಾಡುವುದನ್ನು ಮುಂದುವರಿಸುತ್ತೇನೆ. ಈ ರೀತಿಯ ಹಿಂಸಾಚಾರದಲ್ಲಿ ತೊಡಗುವವರು ಸಂಪೂರ್ಣವಾಗಿ ಅಮಾನವೀಯರು"ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ ಜನರ ಗುಂಪು ಸಚಿವರ ನಿವಾಸಕ್ಕೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಮಣಿಪುರದಲ್ಲಿ ಸಚಿವರೊಬ್ಬರ ಮನೆಗೆ ಬೆಂಕಿ ಹಚ್ಚಿರುವುದು ಇದು 2ನೇ ಬಾರಿ. ಹೆಚ್ಚಿನ ಸಂಖ್ಯೆಯಲ್ಲಿದ್ದ ಗುಂಪು ಆವರಣದೊಳಗೆ ಪ್ರವೇಶಿಸುವುದನ್ನು ಭದ್ರತಾ ಸಿಬ್ಬಂದಿ ತಡೆಯಲು ಸಾಧ್ಯವಾಗಲಿಲ್ಲ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಜೂನ್ 14 ರಂದು ಇಂಫಾಲ್ ಪೂರ್ವದಲ್ಲಿ ಹಿಂಸಾಚಾರದಿಂದ ಒಂಬತ್ತು ಜನರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬುಧವಾರ ದುಷ್ಕರ್ಮಿಗಳು ಇಂಫಾಲ್ ವೆಸ್ಟ್‌ನಲ್ಲಿರುವ ಮಣಿಪುರ ಸಚಿವ ನೆಮ್ಚಾ ಕಿಪ್‌ಗೆನ್ ಅವರ ಅಧಿಕೃತ ನಿವಾಸಕ್ಕೂ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದರು. ಈ ಘಟನೆಯಲ್ಲಿ ಅವರ ಮನೆ ಭಾಗಶಃ ಸುಟ್ಟು ಕರಕಲಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ, ಮಣಿಪುರ ರಾಜ್ಯದಲ್ಲಿ ಇಂಟರ್ನೆಟ್ ಮೇಲೆ ಕಡಿವಾಣ ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ಮೇ 29 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಲ್ಕು ದಿನಗಳ ಕಾಲ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದರು. ಈ ಸಮಯದಲ್ಲಿ ಅವರು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಎಲ್ಲ ರಾಜಕೀಯ ಪಕ್ಷಗಳ ನಾಯಕರು, ನಾಗರಿಕ ಸಮಾಜ, ಮಹಿಳಾ ಗುಂಪುಗಳು, ಬುಡಕಟ್ಟು ಗುಂಪುಗಳು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಭೆ ನಡೆಸಿ, ಶಾಂತಿ ಸ್ಥಾಪಿಸುವ ಪ್ರಯತ್ನ ಮಾಡಿದ್ದರು. ರಾಜ್ಯದಲ್ಲಿ ಶಾಂತಿ ಸಮಿತಿ ರಚಿಸುವುದಾಗಿ ಶಾ ಘೋಷಿಸಿದ್ದರು. ಗೃಹ ಸಚಿವರಿಂದ ಘೋಷಣೆಯಾದ ಕೆಲವೇ ದಿನಗಳಲ್ಲಿ ಸಮಿತಿ ಕೂಡಾ ರಚನೆ ಮಾಡಲಾಗಿದೆ.
ಇನ್ನು ಮೇ 3 ರಂದು ಮಣಿಪುರದಲ್ಲಿ ಹಿಂಸಾಚಾರ ಸಂಭವಿಸಿತು. ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ (ಎಟಿಎಸ್‌ಯು) ಆಯೋಜಿಸಿದ್ದ ರ‍್ಯಾಲಿ ಯಲ್ಲಿ ಘರ್ಷಣೆ ಉಂಟಾಗಿತ್ತು. ಮೇಟಿ/ಮೀಟೆ ಪಂಗಡವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ಬೇಡಿಕೆ ಇಟ್ಟು ಪ್ರತಿಭಟನೆ ಮಾಡಿತ್ತು.
ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಪಟ್ಟಿಗೆ ಸೇರಿಸುವ ಬೇಡಿಕೆಯನ್ನು ರಾಜ್ಯ ಸರ್ಕಾರ ಪರಿಗಣಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದಾದ ಬಳಿಕ ಬೇಡಿಕೆ ಈಡೇರಿಸುವಂತೆ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು.
ಇದನ್ನೂ ಓದಿ:ಸಂಘ ಪರಿವಾರದವರ ಮನೆಗಳ ಮೇಲೆ ಪೆಟ್ರೋಲ್ ಬಾಂಬ್ ದಾಳಿ.. 18 ಜನರ ಬಂಧನ