ಸಾಕುಪ್ರಾಣಿಗಳನ್ನು ಮಕ್ಕಳಂತೆ ಲಾಲನೆ ಪಾಲನೆ ಮಾಡುವ ಅದೆಷ್ಟೋ ಜನ ನಮ್ಮ ನಡುವೆ ಇದ್ದಾರೆ. ಮಾತು ಬಾರದ ಮುಗ್ಧ ಪ್ರಾಣಿಗಳ ಗೆಳೆತನ ಸಾಕಷ್ಟು ನೆಮ್ಮದಿ ನೀಡುತ್ತದೆ ಎಂಬುದು ಹೆಚ್ಚಿನವರ ಅಭಿಪ್ರಾಯ. ಯಾವ ಪ್ರಾಣಿಗಳನ್ನು ಸಾಕುತ್ತೇವೆ ಎಂಬುದರಲ್ಲಿ ಬಹಳಷ್ಟು ವೈವಿಧ್ಯಗಳಿವೆ. ಕೆಲವರು ಬೆಕ್ಕು, ನಾಯಿಗಳನ್ನು ಇಷ್ಟಪಡುತ್ತಾರೆ, ಇನ್ನೂ ಕೆಲವರು ಹಾವುಗಳಂತಹ ಸರೀಸೃಪಗಳನ್ನು ಇಷ್ಟಪಡುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಬ್ಬಾವಿನ ವಿಡಿಯೋವೊಂದು ವೈರಲ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ.
ವೈರಲ್ ವಿಡಿಯೋದಲ್ಲಿ, ಮಹಿಳೆ ತನ್ನ ಮನೆಯಲ್ಲಿ ಹಾವನ್ನು ಕೂಡಿ ಇಟ್ಟಿದ್ದ ಬಾಕ್ಸ್ನ ಮುಚ್ಚಳವನ್ನ ತೆರೆಯುತ್ತಾರೆ. ಸರೀಸೃಪವು ನಿಧಾನವಾಗಿ ಮೇಲೆ ಬರುವಾಗ ಮಹಿಳೆ ತನ್ನ ಬಲಗೈಯನ್ನು ನೀಡುತ್ತಾಳೆ. ಆದರೆ, ಕೆಲವೇ ಸೆಕೆಂಡುಗಳಲ್ಲಿ ಹಾವು ಆಕೆಯ ಕೈಯನ್ನು ಕಚ್ಚಿ, ಭುಜದ ಸುತ್ತಲೂ ಸಂಪೂರ್ಣವಾಗಿ ಸುತ್ತಲು ಪ್ರಯತ್ನಿಸುತ್ತದೆ. ಮಹಿಳೆ ಹಾವನ್ನು ಮತ್ತೆ ಮುಚ್ಚಳಕ್ಕೆ ಹಾಕಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸ್ಥಳದಲ್ಲೇ ಇದ್ದ ಇನ್ನೊಬ್ಬ ವ್ಯಕ್ತಿ ಅವಳ ಸಹಾಯಕ್ಕೆ ಧಾವಿಸಿದರೂ, ದೈತ್ಯ ಸರೀಸೃಪವು ಮಹಿಳೆಯ ಕೈ ಸುತ್ತಿಕೊಳ್ಳುವುದನ್ನ ಮುಂದುವರಿಸುತ್ತದೆ. ಈ ವೇಳೆಗೆ ಮಹಿಳೆಗೆ ಭಾರಿ ರಕ್ತಸ್ರಾವವಾಗಿದೆ.