ಕರ್ನಾಟಕ

karnataka

ಲಿಫ್ಟ್‌ನಲ್ಲಿ ಬಾಲಕನಿಗೆ ಕಚ್ಚಿದ ಸಾಕು ನಾಯಿ: ಮಾಲೀಕರಿಗೆ ₹5 ಸಾವಿರ ದಂಡ

By

Published : Sep 7, 2022, 1:29 PM IST

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹೌಸಿಂಗ್ ಸೊಸೈಟಿ ಲಿಫ್ಟ್‌ನಲ್ಲಿ ಸಾಕು ನಾಯಿಯೊಂದು ಬಾಲಕನನ್ನು ಕಚ್ಚುತ್ತಿರುವ ವಿಡಿಯೋ ವೈರಲ್​​ ಆಗಿದೆ.

Pet Dog Bites Child In Ghaziabad
ಲಿಫ್ಟ್‌ನಲ್ಲಿ ಮಗುವಿಗೆ ಕಚ್ಚಿದ ಸಾಕು ನಾಯಿ

ಗಾಜಿಯಾಬಾದ್:ಹೌಸಿಂಗ್ ಸೊಸೈಟಿ ಲಿಫ್ಟ್‌ನಲ್ಲಿ ಹೋಗುತ್ತಿದ್ದಾಗ ಬಾಲಕನಿಗೆ ನಾಯಿ ಕಚ್ಚಿದ್ದು, ಆ ಸಾಕು ನಾಯಿಯ ಮಾಲೀಕರಾದ ಮಹಿಳೆಗೆ ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ 5,000 ರೂ. ದಂಡ ವಿಧಿಸಿದೆ. ಲಿಫ್ಟ್​ನಲ್ಲಿ ಮಹಿಳೆ ನಾಯಿಯನ್ನು ಕರೆದುಕೊಂಡು ಹೋಗುವಾಗ ಆ ಲಿಫ್ಟ್​ನಲ್ಲಿದ್ದ ಬಾಲಕನಿಗೆ ನಾಯಿ ಕಚ್ಚಿರುವ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಮಾಲೀಕರು ಲಿಫ್ಟ್​ನೊಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಅಲ್ಲಿದ್ದ ಬಾಲಕನನ್ನು ನೋಡಿ ಬೊಗಳಲಾರಂಭಿಸಿದ ನಾಯಿ, ಆತನ ಕಾಲಿಗೆ ಕಚ್ಚಿದೆ. ಲಿಫ್ಟ್​ನಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿತ್ತು. ಗಾಜಿಯಾಬಾದ್‌ನ ರಾಜ್‌ನಗರ ಎಕ್ಸ್‌ಟೆನ್ಶನ್ ಚಾರ್ಮ್ಸ್ ಕೌಂಟಿ ಸೊಸೈಟಿಯಲ್ಲಿ ಸೆಪ್ಟೆಂಬರ್ 5ರಂದು ಸಂಜೆ 6 ಗಂಟೆಗೆ ಘಟನೆ ನಡೆದಿದೆ.

ಮಹಿಳೆಯೊಂದಿಗೆ ಸಾಕು ನಾಯಿ ಲಿಫ್ಟ್‌ಗೆ ಪ್ರವೇಶಿಸಿದ್ದು, ಕೆಲವು ಸೆಕೆಂಡುಗಳ ನಂತರ ನಾಯಿ ಹಾರಿ ಬಾಲಕನನ್ನು ಕಚ್ಚುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ, ನಾಯಿ ಕಚ್ಚಿದ್ದರಿಂದ ಭಯಗೊಂಡು ನೋವಿನಿಂದ ಅಳುತ್ತಿದ್ದ ಆ ಬಾಲಕನ ಬಗ್ಗೆ ಒಂಚೂರೂ ತಲೆಕೆಡಿಸಿಕೊಳ್ಳದ ಮಹಿಳೆ ತನ್ನ ನಾಯಿಯನ್ನು ಕರೆದುಕೊಂಡು ಲಿಫ್ಟ್​ನಿಂದ ಹೊರ ಹೋಗುತ್ತಾಳೆ!.

ಈ ಸಿಸಿಟಿವಿ ದೃಶ್ಯಾವಳಿಯನ್ನು ಇಟ್ಟುಕೊಂಡು ಬಾಲಕನ ಪೋಷಕರು ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಕ್ರಮ ಕೈಗೊಂಡಿರುವ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಘಟನೆಯ ನಂತರ ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮಹಿಳೆಯ ಮನೆಗೆ ಹೋದಾಗ ಆ ಸಾಕು ನಾಯಿಯನ್ನು ನಿಯಮದಂತೆ ರಿಜಿಸ್ಟರ್ ಮಾಡಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ನಿಯಮ ಪಾಲಿಸದ ಆಕೆಗೆ 5,000 ರೂ. ದಂಡ ವಿಧಿಸಲಾಗಿದೆ.

ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಪಶುವೈದ್ಯಕೀಯ ಮತ್ತು ಕಲ್ಯಾಣ ಅಧಿಕಾರಿ ನೀಡಿದ ನೋಟಿಸ್‌ನಲ್ಲಿ, ಮಹಿಳೆ ಮನೆಯಲ್ಲಿ ನಾಯಿಯನ್ನು ಅಕ್ರಮವಾಗಿ ಸಾಕಿದ್ದಾರೆ ಎಂದು ಹೇಳಲಾಗಿದೆ. ನಾಯಿ ಕಚ್ಚುವುದರಿಂದ ರೇಬಿಸ್ ಹರಡುತ್ತದೆ. ಇದರಿಂದ ಸುತ್ತಮುತ್ತಲಿನ ಜನರಿಗೆ ಬಹಳಷ್ಟು ತೊಂದರೆ ಉಂಟುಮಾಡುತ್ತದೆ. ಪುರಸಭೆ ವ್ಯಾಪ್ತಿಯಲ್ಲಿ ನಾಯಿಯನ್ನು ಸಾಕಲು ನೋಂದಣಿ ಮತ್ತು ಲಸಿಕೆ ಕಡ್ಡಾಯವಾಗಿದೆ.

ಇದನ್ನೂ ಓದಿ:ಕಲ್ಲಿದ್ದಲು ಸ್ಮಗ್ಲಿಂಗ್ ಪ್ರಕರಣ: ಪಶ್ಚಿಮ ಬಂಗಾಳ ಸಚಿವರ ನಿವಾಸದ ಮೇಲೆ ಸಿಬಿಐ ದಾಳಿ

ABOUT THE AUTHOR

...view details