ನವದೆಹಲಿ: ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಹೇಳಿಕೆಗಾಗಿ ಬಿಜೆಪಿಯ ನೂಪುರ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಪೀಠದ ಭಾಗವಾಗಿದ್ದ ನ್ಯಾಯಮೂರ್ತಿಗಳು ಇಂದು ತಮ್ಮ ತೀರ್ಪುಗಳಿಗಾಗಿ ವೈಯಕ್ತಿಕ ದಾಳಿ ಎದುರಿಸುತ್ತಿದ್ದಾರೆ. ಈ ಬಗ್ಗೆ ಬೇಸರ ಹೊರಹಾಕಿರುವ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ 'ತೀರ್ಪುಗಳಿಗಾಗಿ ನ್ಯಾಯಮೂರ್ತಿಗಳ ಮೇಲೆ ವೈಯಕ್ತಿಕ ದಾಳಿಗಳು ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗುತ್ತವೆ' ಎಂದಿದ್ದಾರೆ.
ನೂಪುರ್ ಶರ್ಮಾ ಅವರ ಅರ್ಜಿಯ ವಿಚಾರಣೆ ವೇಳೆ ಶರ್ಮಾ ವಿರುದ್ಧ ಮಾತನಾಡಿದ್ದ ನ್ಯಾಯಮೂರ್ತಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಇಬ್ಬರೂ ಸಹ ನೆಟ್ಟಿಗರಿಂದ ತೀವ್ರ ಟೀಕೆ ಎದುರಿಸುತ್ತಿದ್ದಾರೆ.
ತನ್ನ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಎಲ್ಲ ಪ್ರಥಮ ಮಾಹಿತಿ ವರದಿಗಳನ್ನು ಒಟ್ಟುಗೂಡಿಸಿ ದೆಹಲಿಗೆ ವರ್ಗಾಯಿಸಬೇಕು ಎಂದು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು. ತಮ್ಮ ಅರ್ಜಿಯಲ್ಲಿ, ತಾವು ಮತ್ತು ತಮ್ಮ ಕುಟುಂಬವು ಬೆದರಿಕೆಗಳನ್ನು ಎದುರಿಸುತ್ತಿದೆ ಮತ್ತು ರಕ್ಷಣೆಯ ಅಗತ್ಯವಿದೆ ಎಂದು ಮನವಿ ಮಾಡಿದ್ದರು.
ಈ ವಿಚಾರಣೆ ವೇಳೆ ನೂಪುರ್ ಶರ್ಮಾ ಅವರನ್ನು ಏಕೆ ಬಂಧಿಸಲಿಲ್ಲ ಮತ್ತು ದೇಶಾದ್ಯಂತ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದು ಅವರನ್ನು ಹೊಣೆಗಾರರನ್ನಾಗಿ ಯಾಕೆ ಮಾಡಲಿಲ್ಲ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದರು. ಅಲ್ಲದೆ, ನೂಪುರ್ ಶರ್ಮಾ ಅವರು ದೇಶದ ಜನರಲ್ಲಿ ಕ್ಷಮೆಯಾಚಿಸುವಂತೆ ತರಾಟೆಗೆ ತೆಗೆದುಕೊಂಡಿದ್ದರು.