ಶಿಲ್ಲಾಂಗ್ (ಮೇಘಾಲಯ):ಮೇಘಾಲಯದಲ್ಲಿ ತಿಂಗಳಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿನ ಕ್ರೀಡಾಂಗಣದಲ್ಲಿ ಬಿಜೆಪಿ ನಡೆಸಲು ಉದ್ದೇಶಿಸಿದ್ದ ಸಮಾವೇಶಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಮಾವೇಶಕ್ಕೆ ಅನುಮತಿ ನೀಡದೇ ಇರುವುದನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಚುನಾವಣೆಯಲ್ಲಿ ಬಿಜೆಪಿ ವಿಕ್ರಮ ಸಾಧಿಸುವ ಭಯದಿಂದಾಗಿ ಸರ್ಕಾರ ಈ ರೀತಿ ಮಾಡಿದೆ ಎಂದು ಕಿಡಿಕಾರಿದೆ.
ಫೆ.24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ತವರು ಕ್ಷೇತ್ರ ದಕ್ಷಿಣ ತುರಾದ ಪಿಎ ಸಂಗ್ಮಾ ಕ್ರೀಡಾಂಗಣದಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದ್ದರು. ಆದರೆ, ರಾಜ್ಯ ಕ್ರೀಡಾ ಇಲಾಖೆ ಸಮಾವೇಶಕ್ಕೆ ಅನುಮತಿ ನೀಡಿಲ್ಲ. ನೂತನ ಕ್ರೀಡಾಂಗಣದಲ್ಲಿ ಒಂದಷ್ಟು ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಅಲ್ಲಿ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗದು ಎಂದು ಸರ್ಕಾರ ಹೇಳಿದೆ. ಇದು ರಾಜಕೀಯ ಕಿತ್ತಾಟಕ್ಕೆ ನಾಂದಿ ಹಾಡಿದೆ.
ಪಿಎ ಸಂಗ್ಮಾ ಕ್ರೀಡಾಂಗಣದಲ್ಲಿ ದೊಡ್ಡ ಸಮಾವೇಶ ನಡೆಸುವುದು ಸೂಕ್ತವಲ್ಲ. ಕ್ರೀಡಾಂಗಣದಲ್ಲಿ ಕೆಲ ಕಾಮಗಾರಿಗಳು ನಡೆಯುತ್ತಿವೆ. ಮೈದಾನದಲ್ಲಿ ನಿರ್ಮಾಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಹೀಗಾಗಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿಲ್ಲ. ಇದಕ್ಕೆ ಪರ್ಯಾಯವಾಗಿ ಇನ್ನೊಂದು ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಮಾವೇಶ ನಡೆಸುವ ಕುರಿತಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಸೋಲಿನ ಭಯ':ಪ್ರಧಾನಿ ಸಭೆಗೆ ಅನುಮತಿ ನಿರಾಕರಿಸಿದ್ದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಕ್ರೀಡಾಂಗಣ ಉದ್ಘಾಟನೆಯಾಗಿ 2 ತಿಂಗಳು ಕಳೆದಿದೆ. ಪೂರ್ಣವಾಗಿ ಕಾಮಗಾರಿ ಮುಗಿದಿಲ್ಲ ಎಂದು ಸಬೂಬು ಹೇಳಲಾಗ್ತಿದೆ. ಸಿಎಂ ತವರಿನಲ್ಲಿ ಸಮಾವೇಶ ನಡೆಸುತ್ತಿರುವುದಕ್ಕೆ ಕಾನ್ರಾಡ್ ಸಂಗ್ಮಾ ಮತ್ತು ಮುಕುಲ್ ಸಂಗ್ಮಾ ಅವರು ಹೆದರಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಗೆಲುವಿಗೆ ತಡೆ ಒಡ್ಡಲು ಯತ್ನಿಸುತ್ತಿದ್ದಾರೆ ಎಂದೆಲ್ಲಾ ಆರೋಪಿಸಿದೆ.