ಕಾನ್ಪುರ (ಉತ್ತರ ಪ್ರದೇಶ):ಪಿಯೂಷ್ ಜೈನ್ ಬಳಿಕ ಇದೀಗ ಸಮಾಜವಾದಿ ಪಕ್ಷದ ಎಂಎಲ್‌ಸಿ ಆಗಿರುವ ಪುಷ್ಪರಾಜ್ ಜೈನ್ ಅಲಿಯಾಸ್ ಪಂಪಿ ಜೈನ್ ಹಾಗೂ ಮತ್ತೊಬ್ಬ ಸುಗಂಧ ದ್ರವ್ಯ ವ್ಯಾಪಾರಿ ಫೌಜಾನ್ ನಿವಾಸ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಉತ್ತರ ಪ್ರದೇಶದ ಕಾನ್ಪುರ, ಕನೌಜ್, ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್ನ ಸೂರತ್, ತಮಿಳುನಾಡಿನ ದಿಂಡಿಗಲ್ ಸೇರಿದಂತೆ ಇವರಿಬ್ಬರಿಗೆ ಸೇರಿದ ಎಂಟು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಇಂದು ಬೆಳಗ್ಗೆಯಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದೊಂದು ವಾರದಿಂದ ಸೆಂಟ್ ಉದ್ಯಮಿ ಪಿಯೂಷ್ ಜೈನ್ಗೆ ಸೇರಿದ ಸ್ಥಳಗಳಲ್ಲಿ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ ಡೈರೆಕ್ಟರೇಟ್ ಜನರಲ್ ತನಿಖಾ ಸಂಸ್ಥೆಯಡಿ ಬರುವ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್‌ಗಳ ಕೇಂದ್ರೀಯ ಮಂಡಳಿಯ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬರೋಬ್ಬರಿ 194.45 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿತ್ತು.