ತೇಜ್‌ಪುರ ( ಅಸ್ಸೋಂ) : ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯ ಇಬೊಯೈಮಾ ಶುಮಾಂಗ್ ಲೀಲಾ ಸಂಗ್ಲೆನ್ (Iboyaima Shumang Leela Sanglen) ನಲ್ಲಿ ನಡೆದ ಜನರ ಸಮಾವೇಶದಲ್ಲಿ ಮಣಿಪುರ ಸಮಗ್ರತೆ ಸಮನ್ವಯ ಸಮಿತಿ (Coordinating Committee on Manipur Integrity, COCOMI) ಬುಧವಾರ ಚಿನ್ ಕುಕಿ ನಾರ್ಕೋ ( Chin - Kuki Narco ) ವಿರುದ್ಧ ಮಣಿಪುರಿ ರಾಷ್ಟ್ರೀಯ ಯುದ್ಧವನ್ನು ಘೋಷಿಸಿತು.
ಚಿನ್ ಕುಕಿ ನಾರ್ಕೋ ಮತ್ತು ಮೇಟಿ ಜನರ ನಡುವೆ ನಡೆಯುತ್ತಿರುವ ಬಿಕ್ಕಟ್ಟಿಗೆ ಭಾರತ ಸರ್ಕಾರವೇ ಹೊಣೆಯಾಗಬೇಕು ಎಂದು ಪೀಪಲ್ಸ್ ಕನ್ವೆನ್ಷನ್ (ಜನರ ಸಭೆ) ಹೇಳಿದೆ. ನಾರ್ಕೋ ವಿರುದ್ಧ ಸಮರದಲ್ಲಿ ಜಂಟಿಯಾಗಿ ಹೋರಾಡುವಂತೆ ರಾಜ್ಯದ ಎಲ್ಲ ಜನಾಂಗೀಯ ಸಮುದಾಯಗಳಿಗೆ ಸಭೆ ಮನವಿ ಮಾಡಿದೆ. ನಾರ್ಕೋ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ಯುದ್ಧದ ಘೋಷಣೆಯ ನಂತರ ರಾಜ್ಯದಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ಧಾರ್ಮಿಕ ಆಚರಣೆಗಳನ್ನು ಹೊರತುಪಡಿಸಿ ಎಲ್ಲ ಹಬ್ಬಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ಪೀಪಲ್ಸ್ ಕನ್ವೆನ್ಷನ್ ದೃಢಪಡಿಸಿದೆ.
ನಾರ್ಕೋ ಭಯೋತ್ಪಾದಕರ ವಿರುದ್ಧದ ಯುದ್ಧ ಮತ್ತು ಆಕ್ರಮಣವು ಕೊನೆಗೊಂಡಿಲ್ಲದ ಕಾರಣ ಶಸ್ತ್ರಾಸ್ತ್ರಗಳನ್ನು ಸಲ್ಲಿಸದಿರಲು ಪೀಪಲ್ಸ್ ಕನ್ವೆನ್ಷನ್ ನಿರ್ಧರಿಸಿದೆ. ಮಣಿಪುರ ಕಣಿವೆಯಲ್ಲಿ ಯಾವುದೇ ಮಿಲಿಟರಿ ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಬಾರದು ಎಂದು ಹೇಳಿದೆ.
ಈ ಸಭೆಯಲ್ಲಿ ಸಂಘರ್ಷದ ಸಮಯದಲ್ಲಿ ಮಡಿದ ಹುತಾತ್ಮರಿಗೆ ಸ್ಮಾರಕ ಉದ್ಯಾನವನ ಸ್ಥಾಪಿಸಲು ಪೀಪಲ್ಸ್ ಕನ್ವೆನ್ಷನ್ ನಿರ್ಧರಿಸಿತು. ರಾಜ್ಯದ ಪ್ರತಿಯೊಂದು ಗ್ರಾಮವನ್ನು ರಕ್ಷಿಸಲು ಸರ್ಕಾರವು ಗ್ರಾಮ ರಕ್ಷಣಾ ಪಡೆಗಳನ್ನು ಸ್ಥಾಪಿಸಬೇಕು ಎಂದು ಹೇಳಿದೆ. ಕುಕಿ ಭಯೋತ್ಪಾದಕರ ದಾಳಿಯಿಂದ ಗ್ರಾಮಗಳನ್ನು ರಕ್ಷಿಸಲ ಶಸ್ತ್ರಾಸ್ತ್ರ ಪರವಾನಗಿಗಳನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಸಭೆ ಅಂತಿಮವಾಗಿ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಮಾಡಿತು.