ನವದೆಹಲಿ :ಭ್ರಷ್ಟಾಚಾರವನ್ನು ಗೆದ್ದಲಿಗೆ ಹೋಲಿಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಭ್ರಷ್ಟಾಚಾರ ತೊಡೆದು ಹಾಕಲು ಜನರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮದ 85ನೇ ಆವೃತ್ತಿ ಹಾಗೂ ಈ ವರ್ಷದ ಮೊದಲ 'ಮನ್ ಕಿ ಬಾತ್'ನಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ದೇಶದ ವಿವಿಧ ಭಾಗಗಳಿಂದ ಒಂದು ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಮನ್ ಕಿ ಬಾತ್ ಅನ್ನು ಪೋಸ್ಟ್ ಕಾರ್ಡ್‌ಗಳ ಮೂಲಕ ಕಳುಹಿಸಿದ್ದಾರೆ. ಈ ಪೋಸ್ಟ್‌ಕಾರ್ಡ್‌ಗಳು ನಮ್ಮ ದೇಶದ ಭವಿಷ್ಯಕ್ಕಾಗಿ ಹೊಸ ಪೀಳಿಗೆಯ ವಿಶಾಲ ಮತ್ತು ಸಮಗ್ರ ದೃಷ್ಟಿಕೋನವನ್ನು ನೀಡುತ್ತವೆ ಎಂದು ಹೇಳಿದರು.
ಭ್ರಷ್ಟಾಚಾರ ಮುಕ್ತ ಭಾರತ :ಉತ್ತರಪ್ರದೇಶದ ಬಾಲಕಿಯೊಬ್ಬಳು ಕಳುಹಿಸಿದ ಪೋಸ್ಟ್‌ಕಾರ್ಡ್ ಕುರಿತು ಮಾತನಾಡಿದ ಮೋದಿ, ಈ ಬಾಲಕಿ 2047ರ ವೇಳೆಗೆ ಭ್ರಷ್ಟಾಚಾರ ಮುಕ್ತ ಭಾರತವನ್ನು ಕಾಣಬೇಕು ಎಂದು ಬರೆದಿದ್ದಾಳೆ. ಭ್ರಷ್ಟಾಚಾರವು 'ಗೆದ್ದಲು' ಇದ್ದಂತೆ, ಅದು ದೇಶವನ್ನು ಟೊಳ್ಳಾಗಿಸುತ್ತದೆ. ಇದನ್ನು ತೊಲಗಿಸಲು 2047ರವರೆಗೆ ಯಾಕೆ ಕಾಯಬೇಕು? ದೇಶದ ಎಲ್ಲಾ ಜನರು ಒಗ್ಗೂಡಿದರೆ ಈ ಕೆಲಸವನ್ನು ಆದಷ್ಟು ಬೇಗ ಮಾಡಬಹುದು. ಹೀಗಾಗಿ, ನಾವು ನಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡುವುದು ಬಹಳ ಮುಖ್ಯ. ಕರ್ತವ್ಯ ಪ್ರಜ್ಞೆ ಇರುವಲ್ಲಿ, ಕರ್ತವ್ಯವು ಸರ್ವೋಚ್ಛವಾಗಿರುವಲ್ಲಿ ಭ್ರಷ್ಟಾಚಾರವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದರು.