ಮಾಲ್ಡಾ (ಪಶ್ಚಿಮ ಬಂಗಾಳ):ಇಲ್ಲಿನ ಮಾಲಾ ನದಿಯಲ್ಲಿ ಎರಡು ದಿನಗಳ ಹಿಂದಷ್ಟೇ ದುರ್ಗಾ ದೇವಿ ನಿಮಜ್ಜನ ವೇಳೆ ದಿಢೀರ್ ಪ್ರವಾಹ ಉಂಟಾಗಿ 8 ಜನರು ಕೊಚ್ಚಿಕೊಂಡು ಹೋದ ಕಹಿ ನಡೆದಿತ್ತು. ಈಗ ಗಂಗಾ ನದಿಯಲ್ಲಿ 15 ದಿನದ ಹೆಣ್ಣು ಮಗುವೊಂದು ತೇಲಿಬಂದಿದ್ದು, ಇದನ್ನು ಕಂಡ ಜನರು ರಕ್ಷಿಸಿದ್ದಾರೆ.
ಮಾಲ್ಡಾ ಜಿಲ್ಲೆಯಲ್ಲಿ ಹರಿಯುವ ಗಂಗಾ ನದಿ ದಡದಲ್ಲಿ ಕೆಲವರು ಕುಳಿತು ಹರಟೆ ಹೊಡೆಯುತ್ತಿದ್ದಾಗ, ನೀರಿನಲ್ಲಿ ಬಲೂನ್ ತೇಲಿಕೊಂಡು ಹೋಗುತ್ತಿದ್ದುದು ಕಂಡುಬಂದಿದೆ. ಬಳಿಕ ಅದರಿಂದ ಮಗುವಿನ ಅಳುವಿನ ಸದ್ದು ಕೇಳಿಸಿದೆ.
ತಕ್ಷಣವೇ ಎಚ್ಚೆತ್ತುಕೊಂಡ ಜನರು ಅದರಲ್ಲಿ ಮಗು ಇರುವುದನ್ನು ಕಂಡು ದಡದುದ್ದಕ್ಕೂ ಓಡಿಹೋಗಿ ರಕ್ಷಣೆಗೆ ಮುಂದಾದಾಗ ನೀರಿನ ರಭಸಕ್ಕೆ ಬಲೂನ್ ದೂರ ಸಾಗಿದೆ. ಬಳಿಕ ಜನರು ದೋಣಿಯಲ್ಲಿ ಸಾಗಿ ಗಂಗಾನದಿ ಮತ್ತು ಕೋಶಿ ನದಿಯ ಹತ್ತಿರದ ಸಂಗಮಕ್ಕೂ ಮೊದಲು ಮಗುವನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತಂದಿದ್ದಾರೆ.