ಕರ್ನಾಟಕ

karnataka

ETV Bharat / bharat

ದೇಶಾದ್ಯಂತ ಈದ್​​ ಉಲ್​​ ಫಿತರ್​ ಸಂಭ್ರಮ: ಪ್ರಧಾನಿ ಮೋದಿ ಶುಭ ಕೋರಿಕೆ

ದೇಶಾದ್ಯಂತ ರಂಜಾನ್​ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದ ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಹಬ್ಬಕ್ಕೆ ಶುಭ ಕೋರಿದ್ದಾರೆ.

By

Published : Apr 22, 2023, 11:30 AM IST

ದೇಶಾದ್ಯಂತ ಈದ್​​ ಉಲ್​​ ಫಿತರ್​ ಸಂಭ್ರಮ
ದೇಶಾದ್ಯಂತ ಈದ್​​ ಉಲ್​​ ಫಿತರ್​ ಸಂಭ್ರಮ

ನವದೆಹಲಿ:ದಾನ ಧರ್ಮ, ಮಾನವೀಯತೆ, ಪ್ರೀತಿಯ ಸಂದೇಶಗಳನ್ನು ಸಾರುವ ರಂಜಾನ್​ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಮುಸ್ಲಿಂ ಸಮುದಾಯದ ಜನರು ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಪವಿತ್ರ ದಿನವಾದ ಇಂದು ಅಲ್ಲಾಹು ಎಲ್ಲರಿಗೂ ಒಳಿತು ಮಾಡಲಿ ಎಂದು ಹರಕೆ ಮಾಡಿಕೊಂಡರು. ಈದ್-ಉಲ್-ಫಿತರ್​ಗೆ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನರಿಗೆ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಟ್ವೀಟ್​ ಮಾಡಿರುವ ಪ್ರಧಾನಿಗಳು, "ಈದ್-ಉಲ್-ಫಿತರ್ ಶುಭಾಶಯಗಳು. ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವ ಇನ್ನಷ್ಟು ಹೆಚ್ಚಾಗಲಿ. ಪ್ರತಿಯೊಬ್ಬರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಈದ್ ಮುಬಾರಕ್!" ಎಂದು ಬರೆದುಕೊಂಡಿದ್ದಾರೆ.

ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ:ದೇಶಾದ್ಯಂತ ಸಂಭ್ರಮದಿಂದ ಈದ್​ ಉಲ್​ ಫಿತರ್​ ಆಚರಣೆ ಮಾಡಲಾಯಿತು. ಮುಸ್ಲಿಂ ಸಮುದಾಯದ ಜನರು ಪರಸ್ಪರ ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭ ಕೋರಿದರು. ರಾಷ್ಟ್ರವ್ಯಾಪಿ ಮಸೀದಿಗಳಲ್ಲಿ ಗುಂಪುಗೂಡಿರುವ ಜನರು ನಮಾಜ್ ಮಾಡುತ್ತಿರುವ ದೃಶ್ಯಗಳು ಸಕಾರಾತ್ಮಕತೆ ಹೊರಸೂಸುತ್ತವೆ.

ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲಿನ ಜಾಮಾ ಮಸೀದಿಯಲ್ಲಿ ನಮಾಜ್ ಮಾಡಿದ ನಂತರ ಜನರು ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಕೇರಳದಲ್ಲಿ ನಟರಾದ ಮಮ್ಮುಟ್ಟಿ ಮತ್ತು ದುಲ್ಕರ್ ಸಲ್ಮಾನ್ ಅವರು ಸಾರ್ವಜನಿಕರೊಂದಿಗೆ ಬೆರೆತು ಕಾಲೂರ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ನಿತೀಶ್​ ಕುಮಾರ್​ ಅವರು ಭಾಗವಹಿಸಿದ್ದರು.

ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಜಾದ್ ಮತ್ತು ಬಿಜೆಪಿ ನಾಯಕ ಶಹನವಾಜ್ ಹುಸೇನ್ ಈದ್​ ಉಲ್​ ಫಿತರ್​ ಹಿನ್ನೆಲೆ ಪಾರ್ಲಿಮೆಂಟ್ ಸ್ಟ್ರೀಟ್ ಮಸೀದಿಗೆ ಆಗಮಿಸಿ ನಮಾಜ್ ಮಾಡಿದರು. ಬಿಜೆಪಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಇಮಾಮಿಯಾ ಹಾಲ್ ಶಿಯಾ ಜಮಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದರು.

ದೇಶ ಅಭಿವೃದ್ಧಿ ಸಾಧಿಸಲು ಪ್ರಾರ್ಥನೆ:"ಈದ್-ಉಲ್-ಫಿತರ್ ಶಾಂತಿ, ಭ್ರಾತೃತ್ವ, ಮಾನವೀಯತೆ ಮತ್ತು ಪ್ರೀತಿಯ ಸಂದೇಶವನ್ನು ಸಾರುತ್ತದೆ. ದೇಶಕ್ಕಂಟಿದ ಎಲ್ಲ ಅನಿಷ್ಟಗಳು ದೂರವಾಗಲಿ. ಸಂತೋಷವು ಎಲ್ಲೆಡೆ ಹರಡಲಿ. ರಾಷ್ಟ್ರವು ಪ್ರಗತಿ ಸಾಧಿಸುತ್ತಿದೆ. ಸಮೃದ್ಧವಾಗಿ ಇನ್ನಷ್ಟು ಬೆಳೆಯಲಿ ಎಂದು ನಾನು ಅಲ್ಲಾಹುವಿನಲ್ಲಿ ಪ್ರಾರ್ಥಿಸುವೆ ಎಂದು ವ್ಯಕ್ತಿಯೊಬ್ಬರು ಮಸೀದಿಯಲ್ಲಿ ಪ್ರಾರ್ಥನೆಯ ವೇಳೆ ಕೋರಿದರು.

ದೇಶ ಮೊದಲು, ಭಾರತೀಯರು ಮೊದಲು. ಭಾರತದಲ್ಲಿ ಎಲ್ಲೆಡೆ ಪ್ರೀತಿಯಿಂದ ನಮಾಜ್ ಮಾಡಲಾಗುತ್ತಿದೆ. ಸಮುದಾಯಗಳಲ್ಲಿ ಸಹೋದರತ್ವದ ಸಂದೇಶ ರವಾನೆಯಾಗಬೇಕು. ಹಿಂದೂ ಮತ್ತು ಮುಸ್ಲಿಮರು ಪ್ರಪಂಚಕ್ಕೆ ಸ್ನೇಹದ ಸಂದೇಶವನ್ನು ಹರಡಬೇಕಿದೆ. ಪರಿಶುದ್ಧತೆ ಮತ್ತು ಸಹಾನುಭೂತಿಯಿಂದ ಕೂಡಿರುವ ರಂಜಾನ್ ಹಬ್ಬವು ಎಲ್ಲರಿಗೂ ಒಳಿತು ಮಾಡಲಿ ಎಂದು ಕೋರಿದರು.

ಹಬ್ಬದ ಸಂಕ್ಷಿಪ್ತ ಹಿನ್ನೆಲೆ:ಇಸ್ಲಾಮಿಕ್ ಕ್ಯಾಲೆಂಡರ್‌ ಪ್ರಕಾರ 10 ನೇ ತಿಂಗಳಾದ ಶವ್ವಾಲ್‌ನ ಮೊದಲ ದಿನದಂದು ಈದ್-ಉಲ್-ಫಿತರ್ ಅನ್ನು ಆಚರಿಸಲಾಗುತ್ತದೆ. ಹಿಂದಿನಿಂದಲೂ ಇಸ್ಲಾಮಿಕ್ ಸಂಸ್ಕೃತಿಯ ಭಾಗವಾಗಿರುವ ಚಂದ್ರನ ದರ್ಶನದಿಂದಾಗಿ ಈ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಪವಿತ್ರ ರಂಜಾನ್ ತಿಂಗಳನ್ನು ಕೊನೆಗೊಳಿಸಿ, ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುತ್ತದೆ. ಈದ್ ಅನ್ನು ಆಚರಿಸಲು ಚಂದ್ರನ ಗೋಚರತೆ ಅಗತ್ಯವಿರುವ ಕಾರಣ ಆಚರಣೆಯಲ್ಲಿ ಕೆಲವೆಡೆ ಒಂದು ದಿನದ ವ್ಯತ್ಯಾಸ ಉಂಟಾಗುತ್ತದೆ.

ಇದನ್ನೂ ಓದಿ:ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಹತ್ಯಾ ದಾಳಿ ಬೆದರಿಕೆ: ಪೊಲೀಸರ ಭದ್ರತಾ ವಿವರವೂ ಸೋರಿಕೆ

ABOUT THE AUTHOR

...view details