ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ನ ಮೊದಲ ಅಲೆ ವೇಳೆ ಸರ್ಕಾರ, ಜನರು ಹಾಗೂ ಆಡಳಿತ ವರ್ಗ ನಿರ್ಲಕ್ಷ್ಯ ವಹಿಸಿರುವುದೇ ಸದ್ಯದ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಪಾಸಿಟಿವಿಟಿ ಅನ್ಲಿಮಿಟೆಡ್ ಎಂಬ ಉಪನ್ಯಾಸ ಸರಣಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಈ ಮಾಹಿತಿ ನೀಡಿರುವ ಭಾಗವತ್, ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜನರು ಸಕಾರಾತ್ಮಕ ಮತ್ತು ಕ್ರೀಯಾಶೀಲರಾಗಿರಬೇಕು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್ ಮೊದಲ ಅಲೆ ನಂತರ ಸರ್ಕಾರ, ಆಡಳಿತ ಮತ್ತು ಸಾರ್ವಜನಿಕರು ತಮ್ಮ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದಿದ್ದು, ಸಾಂಕ್ರಾಮಿಕ ಕೋವಿಡ್ ವಿರುದ್ಧ ಹೋರಾಡಲು ಪರಸ್ಪರ ಬೆರಳು ತೊರಿಸುವ ಬದಲು ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದಿದ್ದಾರೆ.
ಮೊದಲನೇ ಕೋವಿಡ್ ಅಲೆ ವೇಳೆ ವೈದ್ಯರು, ವಿಜ್ಞಾನಿಗಳು ಮನಗೆ ಎಚ್ಚರಿಕೆ ನೀಡಿದ್ದರು. ಆದರೂ ನಾವು ನಿರ್ಲಕ್ಷ್ಯ ವಹಿಸಿದ್ದೇವೆ ಎಂದ ಭಾಗವತ್, ಮೂರನೇ ಅಲೆಯನ್ನ ಧೈರ್ಯದಿಂದ ಎದುರಿಸಬೇಕಾಗಿದೆ ಎಂದರು.
ಕೋವಿಡ್ ವಿರುದ್ಧ ನಾವು ಸಕಾರಾತ್ಮಕವಾಗಿ ಕೆಲಸ ಮಾಡಬೇಕು. ಪ್ರಸ್ತುತ ಪರಿಸ್ಥಿತಿ ಹತೋಟಿಗೆ ತರಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅತಿ ಅವಶ್ಯವಾಗಿದೆ ಎಂದು ಹೇಳಿದರು. ಇದೇ ವೇಳೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಇಂಗ್ಲೆಂಡ್ ಪರಿಸ್ಥಿತಿ ವಿರುದ್ಧವಾಗಿ ಕಾಣಿಸುತ್ತಿತ್ತು. ಆದರೂ ಅವರು ತಮ್ಮ ಧೈರ್ಯ ಕಳೆದುಕೊಳ್ಳಲಿಲ್ಲ ಎಂದಿದ್ದಾರೆ.