ಉತ್ತರಕಾಶಿ (ಉತ್ತರಾಖಂಡ):ದೇಶದೆಲ್ಲೆಡೆ ವರುಣನ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಇದರಿಂದ ಸಂಪರ್ಕ ಕಡಿತಗೊಳ್ಳುತ್ತಿದೆ, ಕಟ್ಟಡಗಳು ಕುಸಿಯುತ್ತಿವೆ, ಸಂಚಾರಕ್ಕೆ ಅಡ್ಡಿ ಹೀಗೆ ನಾನಾ ಸಮಸ್ಯೆಗಳಿಂದ ಜನರು ಪರದಾಡುತ್ತಿದ್ದಾರೆ.
ಪ್ರತಿ ವರ್ಷ ಮಳೆಗಾಲದಲ್ಲಿ ಉಕ್ಕಿ ಹರಿಯುವ ಭಗೀರಥಿ ನದಿಯನ್ನು ದಾಟಲು ಉತ್ತರಕಾಶಿಯ ಸಿಯುನಾ ಗ್ರಾಮಸ್ಥರು ಟ್ರಾಲಿಯನ್ನು ಅವಲಂಬಿಸಿದ್ದಾರೆ. ನದಿಯನ್ನು ದಾಟುವುದು ಬಹಳಾನೇ ಕಷ್ಟದ ಕೆಲಸವಾಗಿದೆ. ಅದರಲ್ಲೂ ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರಿಗೆ ಅಪಾಯಕಾರಿಯಾಗಿದೆ.
ನದಿ ದಂಡೆಯುದ್ದಕ್ಕೂ ಅಳವಡಿಸುವ ಮರದ ಸೇತುವೆಯು ಪ್ರತಿ ವರ್ಷವೂ ಕೊಚ್ಚಿಹೋಗುತ್ತದೆ. ಇದರಿಂದಾಗಿ ಹಗ್ಗಗಳಲ್ಲಿ ನೇತಾಡುತ್ತ ಪ್ರಯಾಣಿಸುವ ಟ್ರಾಲಿಯನ್ನು ಬೇರೆ ಯಾವುದೇ ಆಯ್ಕೆಯಿಲ್ಲದೇ ಅವಲಂಬಿಸಬೇಕಾಗುತ್ತದೆ. ಗ್ರಾಮಸ್ಥರು ಟ್ರಾಲಿಗಳನ್ನು ಬಳಸಿ ಭಗೀರಥಿ ನದಿಯನ್ನು ದಾಟುತ್ತಿದ್ದಾರೆ. ಟ್ರಾಲಿಗಳ ಬದಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಿಯುನಾ ಗ್ರಾಮಸ್ಥರು ಸರ್ಕಾರ ಮತ್ತು ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
2021ರಿಂದ ತುಂಬಿ ಹರಿಯುವ ನದಿಯಲ್ಲಿ ದಾಟುವ ಮೂಲಕ ತಮ್ಮ ಜೀವವನ್ನು ಅಪಾಯದಲ್ಲಿಟ್ಟುಕೊಂಡಿದ್ದಾರೆ. ಮಳೆಗಾಲದ ದಿನಗಳಲ್ಲಿ ಭಗೀರಥಿಯ ನೀರಿನ ಮಟ್ಟವು ಗಣನೀಯವಾಗಿ ಏರಿದಾಗ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕುತ್ತಾರೆ.