ಉತ್ತರ ಪ್ರದೇಶ: ರಾಜ್ಯದ 12 ಜಿಲ್ಲೆಗಳ 61 ಸ್ಥಾನಗಳಿಗೆ ಇಂದು ಮುಂಜಾನೆ 7 ಗಂಟೆಯಿಂದಲೇ ಐದನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 692 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಚಿವ ಸಿದ್ಧಾರ್ಥ್ ನಾಥ್ ಸಿಂಗ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರಾ ಸೇರಿದಂತೆ ಇತರೆ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಯುಪಿಯಲ್ಲಿ ಮತದಾನದ ಹಕ್ಕು ಚಲಾಯಿಸುತ್ತಿರುವ ವಿದ್ಯಾರ್ಥಿಗಳು ಮತ ಚಲಾಯಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಶವ್ ಪ್ರಸಾದ್ ಮೌರ್ಯ, 'ಬಿಜೆಪಿ ಸರ್ಕಾರ ಉತ್ತರ ಪ್ರದೇಶದ 24 ಕೋಟಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಹೀಗಾಗಿ, ಕಮಲ ಅರಳಿಸಲು ಜನರು ಮನಸ್ಸು ಮಾಡಿದ್ದಾರೆ' ಎಂದರು.
ಉತ್ತರಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಐದನೇ ಹಂತದ ಚುನಾವಣೆಯಲ್ಲಿ ಒಟ್ಟು 25,995 ಮತಗಟ್ಟೆಗಳು ಮತ್ತು 14,030 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ, ಐದನೇ ಹಂತದ ಚುನಾವಣೆಯಲ್ಲಿ 61 ವಿಧಾನಸಭಾ ಕ್ಷೇತ್ರಗಳಲ್ಲಿ 693 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ 90 ಮಹಿಳಾ ಅಭ್ಯರ್ಥಿಗಳಿದ್ದಾರೆ. ನಾಲ್ಕನೇ ಹಂತದ ಮತದಾನವೂ ಪೂರ್ಣಗೊಂಡಿದ್ದು, ಶೇ.57.83ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇನ್ನೂ 2 ಹಂತಗಳ ಮತದಾನ ಬಾಕಿಯಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.