ಹೈದರಾಬಾದ್:ಯಾರಾದರೂ ಸಮಾಜಕ್ಕೆ ಒಳ್ಳೆಯದು ಮಾಡಿದರೆ, ಜನರ ಮನಸ್ಸಿನಲ್ಲಿ ಸ್ಥಾನ ಪಡೆದರೆ ಅಂಥವರ ದೇವಸ್ಥಾನವನ್ನೇ ಕಟ್ಟುವ ಪರಿಪಾಠ ನಮ್ಮ ಜನರಲ್ಲಿದೆ. ಅಂಥದ್ದೇ ಒಂದು ಉದಾಹರಣೆ ತೆಲಂಗಾಣದಲ್ಲಿ ಸಿಕ್ಕಿದೆ. ಅರ್ಚಕರಾಗಿ, ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸಿದ ಮೃತ ವ್ಯಕ್ತಿಯೊಬ್ಬರಿಗೆ 6 ಲಕ್ಷ ರೂಪಾಯಿ ವೆಚ್ಚದ ದೇವಸ್ಥಾನ ನಿರ್ಮಿಸಿದ್ದಾರೆ.
ಜನಗಂ ಜಿಲ್ಲೆಯ ಸ್ಟೇಷನ್‌ಘನಪುರ ಮಂಡಲದ ತಾಟಿಕೊಂಡ ಗ್ರಾಮದ ಸೌಮಿತ್ರಿ ಶ್ರೀರಂಗಾಚಾರ್ಯುಲು (68) ಅವರ ನೆನಪಿನಲ್ಲಿ ಗ್ರಾಮಸ್ಥರು ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಜನವರಿ 4ರಂದು ಉದ್ಘಾಟನೆಯಾಗಲಿದೆ. ಸುತ್ತಮುತ್ತಲ ಜನರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಶ್ರೀರಂಗಾಚಾರ್ಯುಲು ಅವರು 50 ವರ್ಷಗಳಿಂದ ತಾಟಿಕೊಂಡ ಗ್ರಾಮದ ಸೀತಾರಾಮಚಂದ್ರಸ್ವಾಮಿ ದೇವಸ್ಥಾನದ ಅರ್ಚಕರಾಗಿದ್ದರು. ಇದರ ಜೊತೆಗೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪೌರೋಹಿತ್ಯ ನಡೆಸುತ್ತಿದ್ದರು. ನಾಟಿ ಔಷಧಿ ವೈದ್ಯರೂ ಆಗಿದ್ದರು. ಅನಾರೋಗ್ಯಪೀಡಿತರಿಗೆ ಉಚಿತವಾಗಿಯೇ ಔಷಧಿ ನೀಡುತ್ತಿದ್ದರು. ಅವರ ಕೈಗುಣವೆಂಬಂತೆ ರೋಗ ವಾಸಿಯಾಗುತ್ತಿತ್ತು. ಇದರಿಂದ ಅವರನ್ನು ಜನರು ದೇವರಂತೆ ಕಾಣುತ್ತಿದ್ದರು.