ನವದೆಹಲಿ:ಇಂದು ಭಗವಾನ್ ಗೌತಮ ಬುದ್ಧ ಹುಟ್ಟಿದ, ಜ್ಞಾನೋದಯವಾದ ಹಾಗೂ ನಿರ್ವಾಣ ಹೊಂದಿದ ದಿನ. ಈ ಸುದಿನವನ್ನು ದೇಶಾದ್ಯಂತ ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಆದ್ರೆ ಇಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಇದು ಛಾಯಾ ಚಂದ್ರಗ್ರಹಣ. ಅತ್ಯಂತ ಆಕರ್ಷಕ ಖಗೋಳ ವಿದ್ಯಮಾನ. ಸೌರವ್ಯೂಹದ ಕೆಲಸ ಮತ್ತು ಆಕಾಶಕಾಯಗಳ ಚಲನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ತಮ ಅವಕಾಶ.
ಮೂರು ವಿಧದ ಚಂದ್ರಗ್ರಹಣಗಳಿವೆ- ಪೂರ್ಣ ಚಂದ್ರಗ್ರಹಣ, ಭಾಗಶಃ ಚಂದ್ರಗ್ರಹಣ ಮತ್ತು ಪೆನಂಬ್ರಾಲ್ ಚಂದ್ರಗ್ರಹಣ. ಚಂದ್ರನು ಭೂಮಿಯ ನೆರಳಿನ ತೆಳುವಾದ ಮತ್ತು ಹೊರಗಿನ ಪ್ರದೇಶದ ಮೂಲಕ ಹಾದುಹೋದಾಗ ಪೆನಂಬ್ರಾಲ್ ಗ್ರಹಣ ಸಂಭವಿಸುತ್ತದೆ.
ವಿಜ್ಞಾನ ಮತ್ತು ಜ್ಯೋತಿಷ್ಯದ ಪ್ರಕಾರ, 2023 ರ ಮೊದಲ ಚಂದ್ರಗ್ರಹಣವು ಮೇ 5 ರಂದು ರಾತ್ರಿ 8:42 ಕ್ಕೆ ಪ್ರಾರಂಭವಾಗುತ್ತದೆ ಮತ್ತು 1:04 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣ ನಾಲ್ಕೂವರೆ ಗಂಟೆಗಳ ಕಾಲ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವರ್ಷದ ಮೊದಲ ಚಂದ್ರಗ್ರಹಣವು ಛಾಯಾ ಗ್ರಹಣವಾಗಿದೆ. ಈ ಸಮಯದಲ್ಲಿ, ಚಂದ್ರ ಭೂಮಿಯ ನೆರಳಿನ ಮೂಲಕ ಹಾದು ಹೋಗುತ್ತಾನೆ. ಇದು ಚಂದ್ರಗ್ರಹಣಕ್ಕೆ ಕಾರಣವಾಗುತ್ತದೆ. ಭೂಮಿಯ ಸಾಪೇಕ್ಷ ಗಾತ್ರವು ಚಂದ್ರನ ಗಾತ್ರಕ್ಕಿಂತ ದೊಡ್ಡದು. ಅಂದರೆ ಅದರ ನೆರಳು ಸಹ ನೈಸರ್ಗಿಕ ಉಪಗ್ರಹಕ್ಕಿಂತ ದೊಡ್ಡದಾಗಿಯೇ ಇರುತ್ತದೆ.
ಖಗೋಳ ಘಟನೆಯ ಅದ್ಭುತ ನೋಟವು ಭಾರತದಲ್ಲಿ ಗೋಚರಿಸುವುದಿಲ್ಲ. ಯಾವುದೇ ವಿಶೇಷ ಉಪಕರಣಗಳು ಅಥವಾ ದೂರದರ್ಶಕವಿಲ್ಲದೆ ಭೂಮಿಯಿಂದ ಚಂದ್ರಗ್ರಹಣವನ್ನು ನೋಡಬಹುದು. ಸಣ್ಣ ದೂರದರ್ಶಕಗಳು ಈ ನೋಟವನ್ನು ಇನ್ನಷ್ಟು ಉತ್ತಮಗೊಳಿಸಬಹುದು. ಗ್ರಹಣದ ಸಮಯದಲ್ಲಿ ಚಂದ್ರನನ್ನು ನೋಡುವುದು ತುಂಬಾ ಆಕರ್ಷಕವಾಗಿರುತ್ತದೆ. 2023 ರ ಎರಡನೇ ಚಂದ್ರಗ್ರಹಣ ಅಕ್ಟೋಬರ್ 28 ರಂದು ಸಂಭವಿಸುತ್ತದೆ. ಇದು ಭಾಗಶಃ ಚಂದ್ರಗ್ರಹಣವಾಗಿದ್ದು, ಆಸ್ಟ್ರೇಲಿಯಾ, ಪೂರ್ವ ಅಮೆರಿಕ, ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಹಲವು ಪ್ರದೇಶಗಳಲ್ಲಿ ಗೋಚರಿಸುತ್ತದೆ.