ಕರ್ನಾಟಕ

karnataka

ETV Bharat / bharat

ಪೆಗಾಸಸ್‌ ಗೂಢಚರ್ಯೆ: ತನಿಖೆಗೆ ವಿಶೇಷ ಸಮಿತಿ ರಚಿಸಿದ ಇಸ್ರೇಲ್‌ - ಇಸ್ರೇಲ್‌

ಪೆಗಾಸಸ್. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸಂಚಲನ ಮೂಡಿಸಿರುವ ಸಾಫ್ಟ್‌ವೇರ್‌. ಈ ಸ್ಪೈವೇರ್ ಅನ್ನು ದುರುಪಯೋಗಪಡಿಸಿಕೊಂಡು ಜಗತ್ತಿನ ಪ್ರಮುಖ ನಾಯಕರು, ಗಣ್ಯರ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ಮಾಧ್ಯಮ ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ಪೆಗಾಸಸ್‌ನ ದುರುಪಯೋಗ ಮತ್ತು ಪರವಾನಗಿ ಪ್ರಕ್ರಿಯೆಗಳ ಬಗ್ಗೆ ತನಿಖೆ ನಡೆಸಲು ಇಸ್ರೇಲ್ ಸಮಿತಿಯೊಂದನ್ನು ರಚಿಸಿದೆ.

pegasus israel to review allegations of misuse and licensing process
ಜಗತ್ತಿಗೆ ಪೆಗಾಸಸ್‌ ಗೂಢಚಾರ್ಯೆ ಆತಂಕ; ತನಿಖೆಗೆ ಸಮಿತಿ ರಚಿಸಿದ ಇಸ್ರೇಲ್‌

By

Published : Jul 23, 2021, 6:12 PM IST

ನವದೆಹಲಿ: ವಿಶ್ವದಾದ್ಯಂತ ಪೆಗಾಸಸ್ ಸ್ಪೈವೇರ್ ಬೇಹುಗಾರಿಕೆ ಆರೋಪ ಹಿನ್ನೆಲೆಯಲ್ಲಿ ಇಸ್ರೇಲ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಫ್ಟ್‌ವೇರ್ ದುರುಪಯೋಗದ ಬಗ್ಗೆ ತನಿಖೆ ನಡೆಸಲು ವಿಶೇಷ ಸಮಿತಿ ರಚಿಸಿದೆ.

ರಾಜಕಾರಣಿಗಳು, ಮಾಹಿತಿ ಹಕ್ಕು ಕಾರ್ಯಕರ್ತರು ಮತ್ತು ಪತ್ರಕರ್ತರು ಸೇರಿದಂತೆ ಪ್ರಮುಖ ವ್ಯಕ್ತಿಗಳನ್ನು ಪೆಗಾಸಸ್‌ ಸ್ಪೈವೇರ್‌ ಗುರಿಯಾಗಿಸಿದೆ ಎಂದು ಹಲವಾರು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಇದರ ತನಿಖೆಗಾಗಿ ಸಮಿತಿ ರಚಿಸಿರುವುದಾಗಿ ಅಲ್ಲಿನ ಸೇನಾ ರೇಡಿಯೋಗೆ ವಿದೇಶಾಂಗ ವ್ಯವಹಾರಗಳು, ರಕ್ಷಣಾ ಸಮಿತಿಯ ಮುಖ್ಯಸ್ಥ ರಾಮ್ ಬೆನ್ ಬರಾಕ್ ತಿಳಿಸಿದ್ದಾರೆ.

ಈ ಸಾಫ್ಟ್‌ವೇರ್ ಅನ್ನು ಇಸ್ರೇಲ್‌ ಮೂಲದ ಎನ್‌ಎಸ್‌ಒ, ವಿವಿಧ ದೇಶಗಳ ಸರ್ಕಾರಗಳಿಗೆ ಭಯೋತ್ಪಾದನೆ ಮತ್ತು ಅಕ್ರಮಗಳನ್ನು ನಿಗ್ರಹಿಸಲು ಮಾರಾಟ ಮಾಡಿದೆ. ರಕ್ಷಣಾ ಸಚಿವಾಲಯದ ಆಶ್ರಯದಲ್ಲಿ ಈ ಸಮಿತಿ ರಚಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಒಕ್ಕೂಟ ತಿಳಿಸಿದೆ. ಪೆಗಾಸಸ್ ಸಂಬಂಧದ ತನಿಖೆ ಪೂರ್ಣಗೊಂಡ ನಂತರ ಈ ಬಗ್ಗೆ ಕಾನೂನಿಗೆ ತಿದ್ದುಪಡಿಗಳನ್ನು ಮಾಡಬೇಕೇ ಎಂಬುದರ ಬಗ್ಗೆ ನಿರ್ಧಾರಕ್ಕೆ ಬರುತ್ತೇವೆ. ಅನೇಕ ಭಯೋತ್ಪಾದಕ ಸಂಘಟನೆಗಳನ್ನು ಗುರುತಿಸುವಲ್ಲಿ ಪೆಗಾಸಸ್ ಪ್ರಮುಖ ಪಾತ್ರ ವಹಿಸಿದೆ. ಆದರೆ ದುರುಪಯೋಗ ವಿಷಯವನ್ನು ಪರಿಶೀಲಿಸುವ ಅವಶ್ಯಕತೆಯಿದೆ ಎಂದು ಬರಾಕ್‌ ಹೇಳಿದ್ದಾರೆ.

ಸಮಿತಿ ರಚನೆ ನಿರ್ಧಾರ ಸ್ವಾಗತಿಸಿದ ಎನ್ಎಸ್ಒ ಮುಖ್ಯಸ್ಥ

ಇಸ್ರೇಲ್ ಸರ್ಕಾರದ ನಿರ್ಧಾರವನ್ನು ಎನ್‌ಎಸ್‌ಒ ಮುಖ್ಯಸ್ಥ ಶೆಲೆವ್ ಹುಲಿಯೊ ಸ್ವಾಗತಿಸಿದ್ದಾರೆ. ತನಿಖೆ ನಡೆಸಿದರೆ ತಮಗೆ ತುಂಬಾ ಸಂತೋಷವಾಗುತ್ತದೆ. ಅದರಿಂದ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಿಂದ ಮುಕ್ತರಾಗುತ್ತೇವೆ ಎಂದಿದ್ದಾರೆ. ಪ್ರಸ್ತುತ ಆರೋಪಗಳು ಇಡೀ ಇಸ್ರೇಲ್ ಸೈಬರ್ ಉದ್ಯಮದ ಚಿತ್ರಣವನ್ನು ಕೆಡಿಸುವ ಪ್ರಯತ್ನವಾಗಿದೆ. ಗೌಪ್ಯತೆಯ ಕಾರಣದಿಂದಾಗಿ ಸ್ಪೈವೇರ್ ಒಪ್ಪಂದಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ಆದರೂ ಯಾವುದೇ ಸರ್ಕಾರವು ಪೂರ್ಣ ವಿವರಗಳನ್ನು ಕೇಳಿದರೆ ಸಹಕರಿಸುವುದಾಗಿ ಶೆಲೆವ್‌ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಪೆಗಾಸಸ್ ಸ್ಪೈವೇರ್: ಹ್ಯಾಕಿಂಗ್‌ ವೈರಸ್‌ನಿಂದ ಜಾಗತಿಕ ಪ್ರಜಾಪ್ರಭುತ್ವಕ್ಕೆ ಬೆದರಿಕೆ

ಇಸ್ರೇಲ್ ಸ್ಪೈವೇರ್ ಪೆಗಾಸಸ್ ಬಳಸಿ ಭಾರತವು, ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಹಲವಾರು ವಿದೇಶಿಯರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂಬ ವರದಿಗಳ ಬಗ್ಗೆ ಪಾಕಿಸ್ತಾನ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸಿದೆ. ಅಂತಾರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸಿ ಭಾರತ ತನ್ನ ಹಿತಾಸಕ್ತಿಗಾಗಿ ವ್ಯಾಪಕ ಗೂಢಾಚರ್ಯೆ ನಡೆಸಿದೆ. ಪೆಗಾಸಸ್‌ನ ಪರಿಣಾಮಗಳನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇವೆ. ಭಾರತದ ಕ್ರಮಗಳನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಇಡುತ್ತೇವೆ. ಸತ್ಯಾಂಶ ಹೊರ ಬರಬೇಕಾಗಿದೆ. ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ.

ABOUT THE AUTHOR

...view details