ನವದೆಹಲಿ/ಬೆಂಗಳೂರು:ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವಕೀಲ ಶಂಕರ್ ಮಿಶ್ರಾನನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಬಂಧಿಸಿದ್ದಾರೆ. ಈ ಮಧ್ಯೆ ಮಹಿಳೆಗೆ ಪರಿಹಾರವಾಗಿ 15 ಸಾವಿರ ನೀಡಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದು, ಅದನ್ನು ಹಿಂದಿರುಗಿಸಲಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಹೇಳಿದ್ದಾರೆ.
ವಕೀಲ ಮಿಶ್ರಾ ಕಳೆದ ವರ್ಷ ನವೆಂಬರ್ 26 ರಂದು ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ತನ್ನ ಸಹ ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ನೊಂದ ಮಹಿಳೆ ಏರ್ ಇಂಡಿಯಾದ ಆಡಳಿತ ಮಂಡಳಿಗೆ ದೂರು ನೀಡಿದ್ದರು. ತಕ್ಷಣ ಏರ್ ಇಂಡಿಯಾ ಆಡಳಿತ ಮಂಡಳಿ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ದೂರಿನನ್ವಯ ಆರೋಪಿ ಶಂಕರ್ ಮಿಶ್ರಾನ ಕೊನೆಯ ಮೊಬೈಲ್ ಲೊಕೇಷನ್ ಆಧರಿಸಿ ತನಿಖೆ ಆರಂಭಿಸಿದ್ದ ದೆಹಲಿ ಪೊಲೀಸರು ನಿನ್ನೆ ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದ್ದರು.
ಬೆಂಗಳೂರಿನ ಮಾರತ್ ಹಳ್ಳಿಯಲ್ಲಿರುವ ಆರೋಪಿಯ ಕಚೇರಿ, ಮನೆಗಳಲ್ಲಿ ಶೋಧ ನಡೆಸಿದ ದೆಹಲಿ ಪೊಲೀಸರು ತಡರಾತ್ರಿ ಸಂಜಯನಗರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಇಂದು ಬೆಳಗ್ಗೆ ದೆಹಲಿಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 28 ರಂದು ಮಹಿಳೆಯ ಬಟ್ಟೆ ಮತ್ತು ಬ್ಯಾಗ್‌ಗಳನ್ನು ಸ್ವಚ್ಛಗೊಳಿಸಲಾಗಿದೆ. ಬಳಿಕ ಅವುಗಳನ್ನು ನವೆಂಬರ್ 30 ರಂದು ತಲುಪಿಸಲಾಗಿದೆ. ಅಲ್ಲದೇ, ಪರಿಹಾರವಾಗಿ 15 ಸಾವಿರ ರೂಪಾಯಿ ನೀಡಲಾಗಿದೆ ಎಂದು ಆರೋಪಿಯ ವಕೀಲರು ತಿಳಿಸಿದ್ದಾರೆ. ಆರೋಪಿಗಳು ಮತ್ತು ಮಹಿಳೆಯ ನಡುವಿನ ವಾಟ್ಸಾಪ್ ಸಂದೇಶಗಳು ಇವುಗಳನ್ನು ದೃಢೀಕರಿಸಿದ್ದನ್ನು ಸ್ಪಷ್ಟವಾಗಿ ತೋರಿಸುತ್ತದೆ.