ರಾಂಬನ್ (ಜಮ್ಮು-ಕಾಶ್ಮೀರ) : ಕೇಂದ್ರ ಸರ್ಕಾರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು. ಹಾಗಾದ್ರೆ, ಮಾತ್ರ ಕಾಶ್ಮೀರದಲ್ಲಿ ಶಾಂತಿ ನೆಲೆಸುತ್ತದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಅಲ್ಲದೇ ಆರ್ಟಿಕಲ್ 370 ಮತ್ತು 35ಎ ಮರು ಸ್ಥಾಪನೆಗಾಗಿ ಪಿಡಿಪಿ ಮುಂಚೂಣಿಯಲ್ಲಿ ಹೋರಾಡಿದೆ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ಯುವ ಸಮಾವೇಶದಲ್ಲಿ ಮೆಹಬೂಬಾ ಮಾತನಾಡಿದರು. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಿಡಿಪಿ ಕಾರ್ಯಕರ್ತರು ಹಾಗೂ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆಹಬೂಬಾ ಮುಫ್ತಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫಾರೂಕ್ ಕಟೋಚ್ ಔಪಚಾರಿಕವಾಗಿ ಪಿಡಿಪಿಗೆ ಸೇರ್ಪಡೆಯಾದರು. ಅವರನ್ನು ಪಕ್ಷದ ಅಧ್ಯಕ್ಷರು ಆತ್ಮೀಯವಾಗಿ ಸ್ವಾಗತಿಸಿದರು. ಸಮಾವೇಶವನ್ನು ಉದ್ದೇಶಿಸಿ ಹಲವು ಹಿರಿಯ ನಾಯಕರು ಮಾತನಾಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಮೆಹಬೂಬಾ ಮುಫ್ತಿ, ಡಿಲಿಮಿಟೇಶನ್ ಆಯೋಗವು ಬಿಜೆಪಿಯ ಆಯೋಗವಾಗಿದೆ ಮತ್ತು ಪಿಡಿಪಿ ಅದನ್ನು ಗುರುತಿಸುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ವಿದ್ಯಾರ್ಥಿನಿ ಮಿಸ್ಬಾ ಆತ್ಮಹತ್ಯೆ ಪ್ರಕರಣ.. ಶಾಲೆಯ ಪ್ರಿನ್ಸಿಪಾಲ್ ಬಂಧನ
ಜಮ್ಮು ಮತ್ತು ಕಾಶ್ಮೀರದ ಯುವಕರೊಂದಿಗೆ ಘನತೆಯಿಂದ ಮಾತನಾಡಬೇಕೆ ಹೊರತು, ಜೈಲಿಗೆ ಹಾಕುವ ಮೂಲಕ ಅಥವಾ ಗುಂಡು ಹಾರಿಸುವ ಮೂಲಕ ಅಲ್ಲ. ಪಿಡಿಪಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವ ಬಗ್ಗೆ ಮಾತನಾಡಿದರೆ ಬಿಜೆಪಿಗೆ ಏಕೆ ಚಿಂತೆ ಎಂದು ಮೆಹಬೂಬಾ ಪ್ರಶ್ನಿಸಿದರು.