ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದರು. ಯಾವುದೇ ರೀತಿಯ ಭಯೋತ್ಪಾದಕ ಕೃತ್ಯ ಅಥವಾ ಅದಕ್ಕೆ ಯಾವುದೇ ರೂಪದಲ್ಲಿ ಬೆಂಬಲ ನೀಡುವುದು ಮಾನವೀಯತೆಯ ವಿರುದ್ಧದ ದೊಡ್ಡ ಅಪರಾಧ ಎಂದು ಚಳಿ ಬಿಡಿಸಿದರು.
ಇದನ್ನೂ ಓದಿ:ಚೀನಾ ರಕ್ಷಣಾ ಸಚಿವರ ಕೈಕುಲುಕದೇ ಮೌನವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ರಾಜನಾಥ್ ಸಿಂಗ್
ಭಾರತ, ರಷ್ಯಾ, ಚೀನಾ ಮತ್ತು ಇತರ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಎಸ್‌ಸಿಒ ರಕ್ಷಣಾ ಸಚಿವರು ಸಭೆಯನ್ನು ಭಾರತ ಆಯೋಜಿಸಿದೆ. ಇದರಲ್ಲಿ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ವರ್ಚುವಲ್ ಮೂಲಕ ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ರಾಜನಾಥ್ ಸಿಂಗ್, ಒಂದು ರಾಷ್ಟ್ರವು ಭಯೋತ್ಪಾದಕರಿಗೆ ಆಶ್ರಯ ನೀಡಿದರೆ, ಅದು ಇತರರಿಗೆ ಮಾತ್ರವಲ್ಲದೆ ತನಗೂ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದರು.
ಭಯೋತ್ಪಾದನೆ ಎದುರಿಸುವುದೇ ಪ್ರಮುಖ ಆದ್ಯತೆ: ಭಯೋತ್ಪಾದನೆಯ ಬೆದರಿಕೆಯೊಂದಿಗೆ ಶಾಂತಿ ಮತ್ತು ಸಮೃದ್ಧಿ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ. ಯುವಕರ ಆಮೂಲಾಗ್ರೀಕರಣವು ಭದ್ರತೆಯ ದೃಷ್ಟಿಯಿಂದ ಮಾತ್ರವಲ್ಲದೆ ಸಮಾಜದ ಸಾಮಾಜಿಕ ಆರ್ಥಿಕ ಪ್ರಗತಿಯ ಹಾದಿಯಲ್ಲಿ ಪ್ರಮುಖ ಅಡಚಣೆಯಾಗಿದೆ. ನಾವು ಎಸ್‌ಸಿಒಅನ್ನು ಬಲವಾದ ಮತ್ತು ಹೆಚ್ಚು ವಿಶ್ವಾಸಾರ್ಹ ಅಂತಾರಾಷ್ಟ್ರೀಯ ಸಂಘಟನೆಯನ್ನಾಗಿ ಮಾಡಲು ಬಯಸಿದರೆ, ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿರಬೇಕು ಎಂದು ರಕ್ಷಣಾ ಸಚಿವರು ಹೇಳಿದರು.